ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ದಿವಂಗತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ (83) ಅವರು ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಮೃತರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸದ್ಯ ಇಂದಿರಾ ಲಂಕೇಶ್ ಅವರ ಪಾರ್ಥಿವ ಶರೀರವನ್ನು ಕವಿತಾ ಲಂಕೇಶ್ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿದೆ. ನಾಳೆ (ಮಂಗಳವಾರ) ಮೃತರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಇಂದಿರಾ ಲಂಕೇಶ್ ಅವರ ನಿಧನಕ್ಕೆ ತೀವ್ರ ಕಡುಕ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಂಕೇಶ್ ಕುಟುಂಬದೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.
ಪ್ರಸಿದ್ಧ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ದಿವಂಗತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಸಾಹಿತ್ಯ, ಮಾಧ್ಯಮ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಲಂಕೇಶ್ ಅವರು ಮಾಡಿರುವ ಸಾಧನೆಯಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದ ಇಂದಿರಾ ಲಂಕೇಶ್ ಅವರ ಬಹುದೊಡ್ಡ ಕೊಡುಗೆ ಇದೆ ಎನ್ನುವುದು ನಿಸ್ಸಂಶಯ ಎಂದು ಅವರು ಹೇಳಿದ್ದಾರೆ.
ಪ್ರಾರಂಭದ ದಿನಗಳಿಂದಲೂ ಲಂಕೇಶ್ ಅವರ ಕುಟುಂಬದ ಸ್ನೇಹವಲಯದಲ್ಲಿದ್ದ ನನಗೆ ಇಂದಿರಾ ಲಂಕೇಶ್ ಮತ್ತು ಅವರ ಮಕ್ಕಳು ಆತ್ಮೀಯರು. ಸ್ವತಃ ಬರವಣಿಗೆಯನ್ನೂ ಮಾಡುತ್ತಿದ್ದ ಇಂದಿರಾ ಲಂಕೇಶ್, ಪುಸ್ತಕ ಪ್ರಕಟಣೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆಯಷ್ಟೆ ನಡೆದ ಗೌರಿ ಲಂಕೇಶ್ ಹತ್ಯೆಯ ನಂತರ ಆಘಾತಕ್ಕೀಡಾಗಿದ್ದ ಇಂದಿರಾ ಅವರು ಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಇಂದಿರಾ ಲಂಕೇಶ್ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.









