ಡೆಹ್ರಾಡೂನ್.ಆಗಸ್ಟ್.14: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗಕ್ಕೆ ಏಕಾಏಕಿ ನೀರು ಮತ್ತು ಮಣ್ಣು-ಅವಶೇಷಗಳು ನುಗ್ಗಿದ ಪರಿಣಾಮ ಭೀಕರ ದುರಂತ ಸಂಭವಿಸಿದೆ. ಘಟನೆಯಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮತ್ತಿಬ್ಬರು ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಪಲ್‌ಕೋಟಿ ಪ್ರದೇಶದಲ್ಲಿರುವ ಟೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೊರೇಷನ್ (THDC) ಯೋಜನೆಯ ಸುಮಾರು 2 ಕಿ.ಮೀ ಉದ್ದದ ನಿರ್ಮಾಣ ಹಂತದ ಟೇಲ್ ರೇಸ್ ಸುರಂಗದಲ್ಲಿ ಗುರುವಾರ ಸಂಜೆ ಸುಮಾರು 7.05ರ ವೇಳೆಗೆ ಘಟನೆ ಸಂಭವಿಸಿದೆ. ಇಲ್ಲಿ ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿ (HCC) ಕಾಮಗಾರಿ ನಡೆಸುತ್ತಿತ್ತು.
22 ಕಾರ್ಮಿಕರು ಸುರಂಗದೊಳಗೆ
ಅಪಘಾತ ಸಂಭವಿಸಿದ ವೇಳೆ ಸುರಂಗದೊಳಗೆ ಒಟ್ಟು 22 ಕಾರ್ಮಿಕರು ಇದ್ದರು. ನೀರು ಮತ್ತು ಅವಶೇಷಗಳು ಸುರಂಗದೊಳಗೆ ನುಗ್ಗಿದ ಬಳಿಕ ಕಾರ್ಮಿಕರು ಸಿಲುಕಿಕೊಂಡರು. ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ 14 ಮಂದಿಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದು, ಏಳು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇನ್ನೂ ಇಬ್ಬರು ಕಾರ್ಮಿಕರಿಗಾಗಿ ಶೋಧ ಮುಂದುವರಿದಿದೆ.
ರಕ್ಷಣಾ ಕಾರ್ಯಾಚರಣೆಗೆ ಸೇನೆ, NDRF, ITBP
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ, NDRF, ITBP ಹಾಗೂ ಭಾರತೀಯ ಸೇನೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸುರಂಗದೊಳಗೆ ನೀರು ಮತ್ತು ಕೆಸರು ಹೆಚ್ಚಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಹಲವು ಸವಾಲುಗಳು ಎದುರಾಗಿವೆ. ಯಂತ್ರೋಪಕರಣಗಳಿಗೂ ನೀರು ಮತ್ತು ಅವಶೇಷಗಳಿಂದ ತೊಂದರೆಯಾಗಿದೆ ಎಂದು ವರದಿಯಾಗಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನೆ ಕುರಿತು ಆತಂಕ ವ್ಯಕ್ತಪಡಿಸಿದ್ದು, ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಎಲ್ಲಾ ಇಲಾಖೆಗಳು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಚಮೋಲಿ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಸಂಭವಿಸಿರುವ ಈ ದುರಂತದಿಂದ ಕಾರ್ಮಿಕರ ಕುಟುಂಬಗಳಲ್ಲಿ ಆತಂಕ ಮನೆಮಾಡಿದ್ದು, ರಕ್ಷಣಾ ಕಾರ್ಯಾಚರಣೆಯತ್ತ ಎಲ್ಲರ ಗಮನ ನೆಟ್ಟಿದೆ.










