ನವದೆಹಲಿ: ದೇಶೀಯ ಇಂಧನ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ‘ಗೋಬರ್ಧನ್ (GOBARdhan)’ ಯೋಜನೆಗೆ ₹23,731 ಕೋಟಿ ಅನುದಾನ ಮೀಸಲಿಡಲು ಅನುಮೋದನೆ ನೀಡಿದೆ. ದೇಶೀಯ ಸಂಕುಚಿತ ಜೈವಿಕ ಅನಿಲ (CBG) ಉತ್ಪಾದನೆಯನ್ನು ಹೆಚ್ಚಿಸುವುದು ಹಾಗೂ ಇಂಧನ ಕ್ಷೇತ್ರದಲ್ಲಿ ಆಮದು ಅವಲಂಬನೆ ಕಡಿಮೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
2026-27ರಿಂದ 2035-36ರವರೆಗೆ 10 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ಗೋಬರ್ಧನ್ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದರ ಮೂಲಕ ದೇಶದಲ್ಲಿ CBG ಉತ್ಪಾದನೆಗೆ ಅಗತ್ಯವಿರುವ ಮೂಲಸೌಕರ್ಯ, ಹೂಡಿಕೆ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಭಾರತ ತನ್ನ ಅಗತ್ಯದ ದೊಡ್ಡ ಪ್ರಮಾಣದ ನೈಸರ್ಗಿಕ ಅನಿಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ಸಂಘರ್ಷ, ಸಾಗಣೆ ಮಾರ್ಗಗಳಲ್ಲಿನ ಬಿಕ್ಕಟ್ಟು ಸೇರಿದಂತೆ ಹಲವು ಕಾರಣಗಳಿಂದ ಅನಿಲ ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ದೇಶೀಯವಾಗಿ ಪರ್ಯಾಯ ಇಂಧನ ಮೂಲಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಗೋಬರ್ಧನ್ ಯೋಜನೆಯಡಿ CBG ಉತ್ಪಾದನೆಯನ್ನು ಹಲವು ಪಟ್ಟು ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ನಗರ ಅನಿಲ ವಿತರಣಾ ಸಂಸ್ಥೆಗಳಿಂದ ಖಚಿತ ಖರೀದಿ, ಸ್ಥಿರ ಬೆಲೆ ವ್ಯವಸ್ಥೆ, ಬಂಡವಾಳ ಸಹಾಯಧನ, ಸಾಲ ಸೌಲಭ್ಯ ಹಾಗೂ ಪೈಪ್ಲೈನ್ ಮೂಲಸೌಕರ್ಯ ಸೇರಿದಂತೆ ಹಲವು ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ.

ಏನಿದು CBG?
ಸಂಕುಚಿತ ಜೈವಿಕ ಅನಿಲ ಅಥವಾ CBG (Compressed Biogas) ಅನ್ನು ಕೃಷಿ ತ್ಯಾಜ್ಯ, ಜಾನುವಾರುಗಳ ಸಗಣಿ, ಆಹಾರ ತ್ಯಾಜ್ಯ ಹಾಗೂ ನಗರ ಘನತ್ಯಾಜ್ಯ ಸೇರಿದಂತೆ ವಿವಿಧ ಜೈವಿಕ ವಸ್ತುಗಳಿಂದ ಉತ್ಪಾದಿಸಲಾಗುತ್ತದೆ. ಇವುಗಳನ್ನು ಆಮ್ಲಜನಕರಹಿತ ಪರಿಸರದಲ್ಲಿ ಕೊಳೆಯುವಂತೆ ಮಾಡಿ ಜೈವಿಕ ಅನಿಲವನ್ನು ಉತ್ಪಾದಿಸಲಾಗುತ್ತದೆ. ನಂತರ ಅದನ್ನು ಶುದ್ಧೀಕರಿಸಿ ಸಂಕುಚಿತಗೊಳಿಸಿ CBG ರೂಪದಲ್ಲಿ ಬಳಸಲಾಗುತ್ತದೆ.CBGಯ ಗುಣಲಕ್ಷಣಗಳು ಹಲವು ರೀತಿಯಲ್ಲಿ CNGಗೆ ಹೋಲಿಕೆಯಾಗಿರುವುದರಿಂದ ಇದನ್ನು ವಾಹನಗಳ ಇಂಧನವಾಗಿ ಬಳಸುವುದರ ಜೊತೆಗೆ ಕೈಗಾರಿಕಾ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲೂ ಬಳಸಬಹುದು. ಅಗತ್ಯವಿದ್ದಲ್ಲಿ CBG ಮತ್ತು CNGಯನ್ನು ಮಿಶ್ರಣವಾಗಿಯೂ ಬಳಕೆ ಮಾಡಬಹುದಾಗಿದೆ.
ಭಾರತದಲ್ಲಿ CBG ಉತ್ಪಾದನೆಗೆ ಸಾಕಷ್ಟು ಅವಕಾಶಗಳಿದ್ದರೂ, ಕಚ್ಚಾ ವಸ್ತುಗಳ ನಿರಂತರ ಪೂರೈಕೆ, ಹೆಚ್ಚಿನ ಆರಂಭಿಕ ಹೂಡಿಕೆ, ಸ್ಥಳೀಯ ವಿತರಣಾ ವ್ಯವಸ್ಥೆಯ ಕೊರತೆ ಹಾಗೂ ಖರೀದಿ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಈ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಯಾಗಿವೆ.ಇದೀಗ ಗೋಬರ್ಧನ್ ಯೋಜನೆಯ ಮೂಲಕ ಈ ಸಮಸ್ಯೆಗಳನ್ನು ನಿವಾರಿಸಿ ದೇಶೀಯ ಜೈವಿಕ ಅನಿಲ ಉತ್ಪಾದನೆಗೆ ಬಲ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೃಷಿ ಹಾಗೂ ನಗರ ತ್ಯಾಜ್ಯವನ್ನು ಇಂಧನವಾಗಿ ಪರಿವರ್ತಿಸುವುದರಿಂದ ಒಂದೆಡೆ ತ್ಯಾಜ್ಯ ನಿರ್ವಹಣೆ ಸುಧಾರಿಸಿದರೆ, ಮತ್ತೊಂದೆಡೆ ದೇಶದ ಇಂಧನ ಆಮದು ಅವಲಂಬನೆಯನ್ನೂ ಕಡಿಮೆ ಮಾಡಲು ನೆರವಾಗಲಿದೆ.ಮುಂದಿನ 10 ವರ್ಷಗಳಲ್ಲಿ CBG ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆತರೆ, ಭಾರತದ ಇಂಧನ ಸ್ವಾವಲಂಬನೆಯ ಗುರಿಗೆ ಇದು ಮಹತ್ವದ ಕೊಡುಗೆ ನೀಡುವ ನಿರೀಕ್ಷೆಯಿದೆ.









