ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಕಾಂಗ್ರೆಸ್ ಅಂತು ಭರ್ಜರಿ ತಯಾರಿ ನಡೆಸುತ್ತಿದೆ. ಆಪರೇಷನ್ ಹಸ್ತದ ಮಾತುಗಳು ಕೇಳಿ ಬರುತ್ತಿದೆ. ಬಿಜೆಪಿ ತಮ್ಮ ನಾಯಕರನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಹೀಗಿರುವಾಗ ಬಿಜೆಪಿ ಚಿಕ್ಕಬಳ್ಳಾಪುರ ಸಂಸದ ಬಿಎನ್ ಬಚ್ಚೇಗೌಡ್ರು ಇದೀಗ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ರಾಜಕೀಯ ನಿವೃತ್ತಿ ಘೋಷಿಸಿ ಮಾತನಾಡಿದ ಬಚ್ಚೇಗೌಡ್ರು, ನನಗೀಗ ಎಂಪತ್ತೊಂದು ವರ್ಷ. ಪ್ರಧಾನಿ ಮೋದಿಯವರು ಹೇಳುವ ಪ್ರಕಾರ ಎಪ್ಪತ್ತು ವರ್ಷ ದಾಟಿದವರು ರಾಜಕೀಯ ನಿವೃತ್ತಿ ಘೋಷಣೆ ಮಾಡಬೇಕು. ಹೀಗಾಗಿ ನಾನು ಘೋಷಣೆ ಮಾಡಿದ್ದೀನಿ. ಜೊತೆಗೆ ಈ ಬಾರಿ ನನಗೆ ಟಿಕೆಟ್ ಸಿಗುವುದಿಲ್ಲ. ಅದಕ್ಕೆ ನಿವೃತ್ತಿ ಘೋಷಣೆ ಮಾಡಿದ್ದೇನೆ. ಅಷ್ಟೇ ಅಲ್ಲ ಪ್ರಧಾನಿ ಮೋದಿಯವರು ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂದು ಹೇಳಿದ್ದಾರೆ.
ಕುಟುಂಬದಲ್ಲಿ ತಂದೆ, ಮಗ, ಮೊಮ್ಮಗ ಅಂತ ಟಿಕೆಟ್ ನೀಡುವುದಿಲ್ಲ. ಹೀಗಾಗಿ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ. ಪ್ರಧಾನಿ ಮೋದಿಯವರ ಮಾತನ್ನು ಪಾಲನೆ ಮಾಡುತ್ತಾ ಇದ್ದೀನಿ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಒಂದು ಕಡೆ ವಿಪಕ್ಷಗಳೆಲ್ಲಾ ಒಂದಾಗಿದ್ದು, ಈ ಬಾರಿ ಪ್ರಧಾನಿ ಮೋದಿಯನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿವೆ. ಮತ್ತೊಂದು ಕಡೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಗೊಳ್ಳುತ್ತಿದೆ. ಕಾಂಗ್ರೆಸ್ ತೊರೆದವರನ್ನೆಲ್ಲಾ ಮತ್ತೆ ಪಕ್ಷಕ್ಕೆ ಕರೆತರುವ ಕೆಲಸವಾಗುತ್ತಿದೆ. ಇಂದು ಸಂಸದ ಬಚ್ಚೇಗೌಡ್ರು ನಿವೃತ್ತಿ ಘೋಷಣೆ ಮಾಡಿದ್ದು, ಬಿಜೆಪಿಗೆ ಒಂದು ರೀತಿಯ ಶಾಕ್ ಆದಂತೆ ಆಗಿದೆ.