Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೊಬೈಲ್ ಸ್ಕ್ರೀನ್ ಗಾರ್ಡ್‌ಗಳಿಗೂ ಇನ್ಮುಂದೆ BIS ಗುಣಮಟ್ಟ ಕಡ್ಡಾಯ: 2027 ರಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್

---Advertisement---

ಸ್ಮಾರ್ಟ್‌ಫೋನ್ ಡಿಸ್ಪ್ಲೇಗಳನ್ನು ಗೀರು ಮತ್ತು ಹಾನಿಯಿಂದ ರಕ್ಷಿಸಲು ಸಾಮಾನ್ಯವಾಗಿ ಬಳಸುವ ಟೆಂಪರ್ಡ್ ಗ್ಲಾಸ್ ಹಾಗೂ ಸ್ಕ್ರೀನ್ ಪ್ರೊಟೆಕ್ಟರ್‌ಗಳಿಗೆ ಕೇಂದ್ರ ಸರ್ಕಾರ ಹೊಸ ಗುಣಮಟ್ಟದ ಮಾನದಂಡಗಳನ್ನು ನಿಗದಿಪಡಿಸಿದೆ. ಇನ್ಮುಂದೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಮೊಬೈಲ್ ಸ್ಕ್ರೀನ್ ಪ್ರೊಟೆಕ್ಟರ್‌ಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲಾಗಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಸ್ಮಾರ್ಟ್‌ಫೋನ್‌ಗಳಿಗಾಗಿ ತಯಾರಾಗುವ ಸ್ಕ್ರೀನ್ ಪ್ರೊಟೆಕ್ಟರ್‌ಗಳು ಭಾರತೀಯ ಗುಣಮಟ್ಟ IS 19348:2025 ಅನ್ನು ಅನುಸರಿಸುವುದು ಕಡ್ಡಾಯ. ಈ ಹೊಸ ನಿಯಮವು 2027ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಅಂದಿನಿಂದ ದೇಶದಲ್ಲಿ ಸ್ಕ್ರೀನ್ ಪ್ರೊಟೆಕ್ಟರ್‌ಗಳನ್ನು ಮಾರಾಟ ಮಾಡುವ ಎಲ್ಲಾ ತಯಾರಕರು ಹಾಗೂ ಆಮದುದಾರರು BIS ನಿಗದಿಪಡಿಸಿದ ಪರೀಕ್ಷೆಗಳನ್ನು ಪೂರ್ಣಗೊಳಿಸಿ ಪ್ರಮಾಣಪತ್ರ ಪಡೆದಿರಬೇಕಾಗುತ್ತದೆ.

ಹೊಸ ನಿಯಮವು ಸ್ಕ್ರೀನ್ ಗಾರ್ಡ್ ಮೊಬೈಲ್ ಪರದೆಗೆ ಸರಿಯಾಗಿ ಹೊಂದಿಕೊಳ್ಳುತ್ತದೆಯೇ (Fit) ಎಂಬುದನ್ನು ಮಾತ್ರ ನೋಡುವುದಿಲ್ಲ. ಬದಲಿಗೆ, ಅದರ ತಯಾರಿಕೆಗೆ ಬಳಸುವ ವಸ್ತುಗಳು, ಗಾಜಿನ ಗಟ್ಟಿತನ, ದಪ್ಪ (thickness), ಗಾತ್ರ, ಆಕಾರ ಮತ್ತು ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಲಾಗುತ್ತದೆ.

ಜೊತೆಗೆ, ಸ್ಕ್ರೀನ್ ಗಾರ್ಡ್‌ಗಳಲ್ಲಿ ಬಳಸಲಾಗುವ:

ಅಂಟು ಪದರ (Adhesive layer)

ಆಂಟಿ-ಶ್ಯಾಟರ್ ಫಿಲ್ಮ್ (Anti-shatter film)

ಓಲಿಯೋಫೋಬಿಕ್ ಕೋಟಿಂಗ್ (Oleophobic coating)

ಆಂಟಿ-ಗ್ಲೇರ್ ಮತ್ತು ಬ್ಲೂ-ಲೈಟ್ ಫಿಲ್ಟರ್‌ಗಳು

ಪ್ರೈವಸಿ ಫಿಲ್ಟರ್‌ಗಳು ಕೂಡ ಈ BIS ಗುಣಮಟ್ಟದ ಮಾನದಂಡದ ವ್ಯಾಪ್ತಿಗೆ ಒಳಪಡುತ್ತವೆ.

ಕಳಪೆ ಉತ್ಪನ್ನಗಳಿಗೆ ಬ್ರೇಕ್: ಮಾರುಕಟ್ಟೆಯಲ್ಲಿ ಸಿಗುವ ಕಳಪೆ ದರ್ಜೆಯ ಗ್ಲಾಸ್‌ಗಳ ಹಾವಳಿ ತಪ್ಪಲಿದ್ದು, ಗ್ರಾಹಕರಿಗೆ ಗುಣಮಟ್ಟದ ಮತ್ತು ಸುರಕ್ಷಿತ ಉತ್ಪನ್ನಗಳು ದೊರೆಯಲಿವೆ. ನಿಗದಿತ ಮಾನದಂಡ ಪೂರೈಸದ ವಸ್ತುಗಳ ಮಾರಾಟಕ್ಕೆ ನಿರ್ಬಂಧ ಬೀಳಲಿದೆ.

ಬೆಲೆ ಏರಿಕೆ ಸಾಧ್ಯತೆ: ಕಂಪನಿಗಳು ಲ್ಯಾಬ್ ಪರೀಕ್ಷೆ ಹಾಗೂ ಪ್ರಮಾಣೀಕರಣಕ್ಕಾಗಿ ಪ್ರತ್ಯೇಕ ವೆಚ್ಚ ಭರಿಸಬೇಕಾಗಿರುವುದರಿಂದ, ಸ್ಕ್ರೀನ್ ಪ್ರೊಟೆಕ್ಟರ್‌ಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗುವ ಸಾಧ್ಯತೆಯಿದೆ.

ಸದ್ಯಕ್ಕೆ ಗ್ರಾಹಕರು ಈ ಬಗ್ಗೆ ತಕ್ಷಣಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಕಂಪನಿಗಳು ತಮ್ಮ ಉತ್ಪನ್ನಗಳನ್ನು ಹೊಸ ಮಾನದಂಡಗಳಿಗೆ ತಕ್ಕಂತೆ ಬದಲಾಯಿಸಿಕೊಳ್ಳಲು ಮತ್ತು ಪರೀಕ್ಷೆಗಳನ್ನು ಪೂರ್ಣಗೊಳಿಸಲು 2027ರ ಏಪ್ರಿಲ್ 1ರವರೆಗೆ ಕಾಲಾವಕಾಶ ನೀಡಲಾಗಿದೆ.

Join WhatsApp

Join Now

Join Telegram

Join Now