ನವದೆಹಲಿ: ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಮಾಸಿಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಜೀವನ್ ಪ್ರಮಾಣ ಪತ್ರವನ್ನು (ಲೈಫ್ ಸರ್ಟಿಫಿಕೇಟ್) ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದೆ. ನಿಗದಿತ ಗಡುವಿನೊಳಗೆ ಲೈಫ್ ಸರ್ಟಿಫಿಕೇಟ್ ಸಲ್ಲಿಕೆ ಮಾಡದಿದ್ದರೆ ಮುಂದಿನ ತಿಂಗಳಿನಿಂದ ಪಿಂಚಣಿ ಹಣ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಪಿಂಚಣಿದಾರರು ಜೀವಂತವಾಗಿದ್ದಾರೆ ಎಂಬುದನ್ನು ದೃಢೀಕರಿಸಲು ಪ್ರತಿ ವರ್ಷ ಜೀವನ್ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಈ ಆಧಾರದ ಮೇಲೆಯೇ ಸರ್ಕಾರವು ಪಿಂಚಣಿ ಹಣವನ್ನು ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡುತ್ತದೆ. ಸಾಮಾನ್ಯ ಪಿಂಚಣಿದಾರರಿಗೆ ನವೆಂಬರ್ 1 ರಿಂದ ನವೆಂಬರ್ 30 ರವರೆಗೆ ಸಲ್ಲಿಕೆಗೆ ಅವಕಾಶವಿದ್ದರೆ, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ (Super Senior Citizens) ಅಕ್ಟೋಬರ್ 1 ರಿಂದಲೇ ಈ ಪ್ರಕ್ರಿಯೆ ಪ್ರಾರಂಭವಾಗಿದೆ.
ಮನೆಯಲ್ಲೇ ಕುಳಿತು ಸಲ್ಲಿಕೆಗೆ ಅವಕಾಶ
ಜೀವನ್ ಪ್ರಮಾಣ ಪತ್ರ ಸಲ್ಲಿಸಲು ಬ್ಯಾಂಕ್ಗಳಿಗೆ ಅಥವಾ ಕಚೇರಿಗಳಿಗೆ ಅಲೆಯಬೇಕಿಲ್ಲ. ಮೊಬೈಲ್ ಮೂಲಕವೇ ಆನ್ಲೈನ್ನಲ್ಲಿ ಸುಲಭವಾಗಿ ಸಲ್ಲಿಸಬಹುದು.
ಮೊಬೈಲ್ನಲ್ಲಿ Jeevan Pramaan App ಮತ್ತು Aadhaar Face RD App ಬಳಸಿ ಮುಖ ಗುರುತಿಸುವಿಕೆ (Face Biometric) ಮೂಲಕ ದೃಢೀಕರಿಸಬಹುದು.
ಹತ್ತಿರದ ಸಿಎಸ್ಸಿ (CSC) ಕೇಂದ್ರಗಳು, ಸರ್ಕಾರಿ ಸೇವಾ ಕೇಂದ್ರಗಳು ಅಥವಾ ನಿಗದಿತ ಬ್ಯಾಂಕ್ ಶಾಖೆಗಳಿಗೆ ತೆರಳಿ ಬಯೋಮೆಟ್ರಿಕ್ ಮೂಲಕವೂ ನೀಡಬಹುದು.

ಇದಕ್ಕಾಗಿ ಪಿಂಚಣಿ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ (PPO) ಸಂಖ್ಯೆ ಹಾಗೂ ಬ್ಯಾಂಕ್ ಪಾಸ್ಬುಕ್ ವಿವರಗಳು ಅಗತ್ಯ.
ಮನೆಬಾಗಿಲಿಗೇ ಬರಲಿದ್ದಾರೆ ಅಂಚೆ ಸಿಬ್ಬಂದಿ
ಅಂಚೆ ಇಲಾಖೆ (India Post Payments Bank) ಮೂಲಕವೂ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಅಂಚೆ ಕಚೇರಿಗೆ ಹೋಗಲು ಸಾಧ್ಯವಾಗದ ವೃದ್ಧರು ಅಥವಾ ಅಸ್ವಸ್ಥರು ಪೋಸ್ಟ್ಮನ್ ಅಥವಾ ಗ್ರಾಮೀಣ ಡಾಕ್ ಸೇವಕರನ್ನು ಸಂಪರ್ಕಿಸಿದರೆ, ಸಿಬ್ಬಂದಿಯೇ ನೇರವಾಗಿ ಮನೆಗೆ ಬಂದು ಬಯೋಮೆಟ್ರಿಕ್ ಮೂಲಕ ಪ್ರಮಾಣ ಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ.
ಹೀಗಾಗಿ ಪಿಂಚಣಿ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ನವೆಂಬರ್ 30ರೊಳಗಾಗಿ ಎಲ್ಲಾ ಪಿಂಚಣಿದಾರರು ತಪ್ಪದೇ ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಕೋರಲಾಗಿದೆ.












