ಸುದ್ದಿಒನ್,ಉತ್ತರ ಕನ್ನಡ,ಮೇ.25: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋಗಿ ನದಿ ಪಾಲಾಗಿದ್ದವರ ದುರಂತದಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ನಿನ್ನೆಯಿಂದ ನಾಪತ್ತೆಯಾಗಿದ್ದ ಮಾದೇವ ನಾಯ್ಕ್ ಅವರ ಮೃತನದಿದೇಹ ಇಂದು ಪತ್ತೆಯಾಗುವ ಮೂಲಕ, ಭಾನುವಾರ ನಡೆದ ಘೋರ ದುರಂತದ ಎಲ್ಲ 11 ಶವಗಳನ್ನು ಹೊರತೆಗೆದಂತಾಗಿದೆ.
ಭಾನುವಾರ ನಡೆದ ಈ ಕರುಣಾಜನಕ ಘಟನೆಯಲ್ಲಿ ಒಟ್ಟು 11 ಜನರು ನೀರುಪಾಲಾಗಿದ್ದರು. ಇವರ ಪೈಕಿ ನಿನ್ನೆಯೇ 10 ಜನರ ಮೃತದೇಹಗಳು ಪತ್ತೆಯಾಗಿದ್ದವು. ಆದರೆ, ಮಾದೇವ ನಾಯ್ಕ್ ಅವರ ಪತ್ತೆಯಾಗಿರಲಿಲ್ಲ. ಹೀಗಾಗಿ ಇಂದು ಬೆಳಿಗ್ಗೆಯಿಂದಲೇ ತೀವ್ರ ಶೋಧ ಕಾರ್ಯವನ್ನು ಮುಂದುವರಿಸಲಾಗಿತ್ತು. ಈ ಬೃಹತ್ ಕಾರ್ಯಾಚರಣೆಗೆ ಸ್ಥಳೀಯ ಮೀನುಗಾರರು ಕೂಡ ಕೈಜೋಡಿಸಿದ್ದರು. ತೀವ್ರ ಹುಡುಕಾಟದ ಬಳಿಕ ಇಂದು ಮಾದೇವ್ ನಾಯ್ಕ್ ಅವರ ಶವ ಪತ್ತೆಯಾಗಿದೆ.

ಸದ್ಯ ಎಲ್ಲ 11 ಮೃತದೇಹಗಳು ಲಭ್ಯವಾಗಿದ್ದು, ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.










