ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಮತ್ತೊಂದು ಸಂತಸದ ಸುದ್ದಿ ನೀಡಿದೆ. ಇತ್ತೀಚೆಗೆ ಆರಂಭಗೊಂಡಿದ್ದ ಯಶವಂತಪುರ-ವಿಜಯಪುರ ನೇರ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯ ಅವಧಿಯನ್ನು ಇನ್ನೂ ಎರಡು ತಿಂಗಳ ಕಾಲ ವಿಸ್ತರಿಸಲಾಗಿದೆ.ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆ ಹಾಗೂ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಯಶವಂತಪುರ-ವಿಜಯಪುರ ನಡುವಿನ ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳಾದ (06577/06578) ಸೇವಾ ಅವಧಿ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಯಶವಂತಪುರ-ವಿಜಯಪುರ ರೈಲು ಸೇವೆ ವಿಸ್ತರಣೆ
ಪ್ರತಿ ಶನಿವಾರ ಮತ್ತು ಸೋಮವಾರ ಯಶವಂತಪುರದಿಂದ ಹೊರಡುವ ವಿಶೇಷ ಎಕ್ಸ್‌ಪ್ರೆಸ್ ರೈಲು (06577) ಮೊದಲು ಜೂನ್ 1ರಿಂದ ಜೂನ್ 29ರವರೆಗೆ ಮಾತ್ರ ಸಂಚರಿಸಲು ಅನುಮತಿ ನೀಡಲಾಗಿತ್ತು. ಇದೀಗ ಈ ಸೇವೆಯನ್ನು ಜುಲೈ 4ರಿಂದ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ. ಆದರೆ ಆಗಸ್ಟ್ 1 ಮತ್ತು 3ರಂದು ಈ ರೈಲು ಸಂಚರಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ವಿಜಯಪುರ-ಯಶವಂತಪುರ ರೈಲುಗೂ ವಿಸ್ತರಣೆ
ಪ್ರತಿ ಭಾನುವಾರ ಮತ್ತು ಮಂಗಳವಾರ ವಿಜಯಪುರದಿಂದ ಹೊರಡುವ ವಿಶೇಷ ರೈಲು (06578) ಜೂನ್ 30ರವರೆಗೆ ಮಾತ್ರ ನಿಗದಿಯಾಗಿತ್ತು. ಇದೀಗ ಈ ಸೇವೆಯನ್ನು ಜುಲೈ 5ರಿಂದ ಸೆಪ್ಟೆಂಬರ್ 1ರವರೆಗೆ ವಿಸ್ತರಿಸಲಾಗಿದೆ. ಆಗಸ್ಟ್ 2 ಮತ್ತು 4ರಂದು ರೈಲು ಸಂಚಾರ ಇರುವುದಿಲ್ಲ.
ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ
ರೈಲಿನ ವೇಳಾಪಟ್ಟಿ, ಮಾರ್ಗ, ನಿಲ್ದಾಣಗಳು ಹಾಗೂ ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸೇವಾ ಅವಧಿಯನ್ನು ಮಾತ್ರ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಯಾವ ಮಾರ್ಗದಲ್ಲಿ ಸಂಚರಿಸಲಿದೆ?
ಈ ರೈಲು ಹುಬ್ಬಳ್ಳಿ ಜಂಕ್ಷನ್ ಪ್ರವೇಶಿಸದೆ ಹುಬ್ಬಳ್ಳಿ-ಗದಗ ಬೈಪಾಸ್ ಮಾರ್ಗದ ಮೂಲಕ ಸಂಚರಿಸಲಿದೆ. ಪ್ರಯಾಣದ ವೇಳೆ ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಗದಗ ಬೈಪಾಸ್, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಹಾಗೂ ಬಸವನ ಬಾಗೇವಾಡಿ ರಸ್ತೆ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಶಾಶ್ವತ ರೈಲು ಸೇವೆಗೆ ಒತ್ತಾಯ
ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತಿರುವ ಹಿನ್ನೆಲೆಯಲ್ಲಿ ಈ ವಿಶೇಷ ರೈಲನ್ನು ಶಾಶ್ವತ ಸೇವೆಯಾಗಿ ಘೋಷಿಸುವಂತೆ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಮತ್ತು ರೈಲ್ವೆ ಹೋರಾಟಗಾರರು ಕೇಂದ್ರ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಬೇಡಿಕೆಗೆ ಶೀಘ್ರದಲ್ಲೇ ಸಕಾರಾತ್ಮಕ ಸ್ಪಂದನೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.







