ಧಾರವಾಡ: ಕೆಲವೊಂದು ಯೋಜನೆಗಳೇ ಹಾಗೆ. ಘೋಷಣೆಯಾದ ಮೇಲೆ ಜಾರಿಯಾಗೋದೆ ಕಷ್ಟ. ನಾಮಕಾವಸ್ಥೆಗೆ ಘೋಷಣೆಯಾಗಿ ಹಾಗೇ ಉಳಿದು ಬಿಡುತ್ತವೆ. ಅದೇ ಹಾದಿಯಲ್ಲಿರುವುದು ಧಾರವಾಡ-ಬೆಳಗಾವಿ ನೇರ ರೈ ಯೋಜನೆ. ಇದೀಗ ಮತ್ತೆ ಅಸ ಯೋಜನೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಲೋಕಸಭಾ ಚುನಾವಣೆಯಲ್ಲಿ ಎರಡು ಕಡೆ ಬಿಜೆಪಿ ಬಂದಿರುವುದು.
ಧಾರವಾಡದಲ್ಲಿ ಈ ಬಾರಿಯೂ ಪ್ರಹ್ಲಾದ್ ಜೋಶಿಯೇ ಗೆಲುವು ಕಂಡಿದ್ದಾರೆ. ಸಂಸತ್ ಗೆ ಆಯ್ಕೆಯಾಗಿದ್ದಾರೆ. ಇನ್ನು ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಗೆದ್ದಿದ್ದಾರೆ. ಇಬ್ಬರು ಸಂಸದರಾಗಿರುವ ಕಾರಣ ಈ ಯೋಜನೆಗೆ ಇನ್ನಾದರೂ ಚಾಲನೆ ಸಿಗುತ್ತಾ ಎಂಬುದನ್ನು ಜನ ಎದುರು ನೋಡುತ್ತಿದ್ದಾರೆ.
ಧಾರವಾಡ ಬೆಳಗಾವಿ ರೈಲು ಯೋಜನೆಯ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಇದಕ್ಕಾಗಿ ಈಗಾಗಲೇ ಯೋಜನೆ ರೂಪಿಸಿ, ಅದು ಜಾರಿಯಾಗುವ ಹಂತಕ್ಕೂ ಬಂದಿತ್ತು. ಆದರೆ ಅನೇಕ ಕಾರಣಗಳಿಂದ ಅದು ಮುಂದುವರೆಯುತ್ತಲೇ ಇಲ್ಲ. ಧಾರವಾಡದಿಂದ ಬೆಳಗಾವಿಗೆ ಈಗಿರುವ ರೈಲಿನ ಮೂಲಕ ಹೋದರೆ ಬರೋಬ್ಬರಿ ಮೂರು ಗಂಟೆ ಬೇಕು. ಏಕೆಂದರೆ ಧಾರವಾಡದಿಂದ ಹೊರಡೋ ರೈಲು ಅಳ್ನಾವರ್, ಲೋಂಡಾ, ಖಾನಾಪುರ ಮೂಲಕ ಬೆಳಗಾವಿ ಮುಟ್ಟಬೇಕಿದೆ. ಆದರೆ ಈ ಮಾರ್ಗದ ಬದಲಿಗೆ ನೇರವಾಗಿ ಧಾರವಾಡ-ಬೆಳಗಾವಿಗೆ ರೈಲು ಮಾರ್ಗ ನಿರ್ಮಾಣ ಮಾಡಲು ಅನೇಕ ವರ್ಷಗಳಿಂದ ಒತ್ತಾಯ ಕೇಳಿ ಬಂದಿತ್ತು. ಬೆಳಗಾವಿ ಸಂಸದ ಸುರೇಶ ಅಂಗಡಿ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಬಳಿಕ ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಒಂದು ವೇಳೆ ಈ ಯೋಜನೆ ಪೂರ್ಣಗೊಂಡರೆ, ಧಾರವಾಡದಿಂದ ಬೆಳಗಾವಿಗೆ ಅರ್ಧ ಗಂಟೆಯಲ್ಲಿಯೇ ತಲುಪಬಹುದಾಗಿದೆ.