Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ಯಾರಂಟಿ ಯೋಜನೆಗಳು ದುರುಪಯೋಗವಾಗದಂತೆ ಎಚ್ಚರ ವಹಿಸಿ : ಆರ್.ಶಿವಣ್ಣ ಸೂಚನೆ

---Advertisement---

ಚಿತ್ರದುರ್ಗ. ಜೂ.19: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಬೇಕು. ಯಾವುದೇ ಕಾರಣಕ್ಕೂ ಯೋಜನೆಗಳು ದುರುಪಯೋಗವಾಗದಂತೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಕಟ್ಟುನಿಟ್ಟಿನ ಸೂಚನೆ ನೀಡಿದರು.

 

ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಶುಕ್ರವಾರ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

ಗೃಹಲಕ್ಷ್ಮಿ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ಕಾರ್ಡ್ ಆಧಾರದ ಮೇಲೆ ಮಾತ್ರ ನೆರವು ಸಿಗಬೇಕು. ಗೃಹಜ್ಯೋತಿ ಯೋಜನೆ ಗೃಹ ಬಳಕೆಗೆ ಮಾತ್ರ ಸೀಮಿತವಾಗಿದ್ದು, ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗದಂತೆ ಎಚ್ಚರ ವಹಿಸಬೇಕು. ಒಂದೇ ಮನೆಯನ್ನು ಕೃತಕವಾಗಿ ವಿಭಜಿಸಿ, ಪ್ರತ್ಯೇಕ ಆರ್.ಆರ್ ಸಂಖ್ಯೆಗಳನ್ನು ಪಡೆದು ಒಂದೇ ಕುಟುಂಬದ ಹಲವರು ಸೌಲಭ್ಯ ಪಡೆಯಲು ಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ ಇಂತಹ ಅಕ್ರಮಗಳಿಗೆ ಆಸ್ಪದ ನೀಡಬಾರದು. ಗ್ಯಾರಂಟಿ ಯೋಜನೆಗಳು ದುರುಪಯೋಗ ಅಥವಾ ಅನರ್ಹರಿಗೆ ಸೌಲಭ್ಯ ಸಿಗುತ್ತಿರುವುದು ಕಂಡುಬಂದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

 

ಗ್ರಾಮೀಣ ಭಾಗದಲ್ಲಿ ನಿಜವಾದ ಬಡವರಾಗಿದ್ದರೂ ತಾಂತ್ರಿಕ ಕಾರಣಗಳಿಂದ ಎಪಿಎಲ್ ಕಾರ್ಡ್ ಪಡೆದಿರುವ ಮತ್ತು ತಂದೆ-ತಾಯಿ ಇಬ್ಬರೇ ಇರುವ ಅರ್ಹ ಕುಟುಂಬಗಳನ್ನು ಗುರುತಿಸಿ, ತಹಶೀಲ್ದಾರ್ ಕಡೆಯಿಂದ ಸೂಕ್ತ ದಾಖಲೆಗಳನ್ನು ಪಡೆದು, ಅವರಿಗೆ ಪುನಃ ಬಿಪಿಎಲ್ ಕಾರ್ಡ್ ಒದಗಿಸುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಶಿವಣ್ಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮೃತಪಟ್ಟ ಮಹಿಳೆಯರ ಗೃಹಲಕ್ಷ್ಮಿ ಹಣ ತಡೆ: ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟ ಮಹಿಳೆಯರ ಖಾತೆಗಳಿಗೆ ಹಣ ಪಾವತಿಯಾಗುತ್ತಿರುವುದನ್ನು ತಡೆ ಹಿಡಿಯಲು ಗ್ಯಾರಂಟಿ ಪ್ರಾಧಿಕಾರ ಮತ್ತು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ ತಿಳಿಸಿದರು.

 

ಇದುವರೆಗೆ ಜಿಲ್ಲೆಯಲ್ಲಿ ಇಂತಹ ಸುಮಾರು 8,843 ಮೃತಪಟ್ಟ ಪ್ರಕರಣಗಳು ಗುರುತಿಸಲಾಗಿದ್ದು, ಅವರಿಗೆ ಹಣ ಪಾವತಿಯಾಗುವುದನ್ನು ಈಗಾಗಲೇ ನಿಲ್ಲಿಸಲಾಗಿದೆ. ಕಳೆದ ಮೂರರಿಂದ ನಾಲ್ಕು ತಿಂಗಳಿಂದಲೇ ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಇದುವರೆಗೆ 3,75,477 ಫಲಾನುಭವಿಗಳಿಗೆ 30ನೇ ಕಂತಿನ ರೂಪದಲ್ಲಿ ಒಟ್ಟು 75.97 ಕೋಟಿ ಪಾವತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4 ಲಕ್ಷಕ್ಕೂ ಅಧಿಕ ಫಲಾನುಭವಿಗಳಿದ್ದು, ಇ-ಕೆವೈಸಿ ಮಾಡಿಸದ ಹಿನ್ನೆಲೆಯಲ್ಲಿ 899 ಜನರಿಗೆ, ಎನ್‍ಪಿಸಿಐ ಮ್ಯಾಪಿಂಗ್ ಆಗದ ಕಾರಣ 1,409 ಜನರಿಗೆ ಹಾಗೂ ಐಟಿ ಜಿಎಸ್‍ಟಿ ಪಾವತಿದಾರರಾಗಿರುವ 2,242 ಫಲಾನುಭವಿಗಳಿಗೆ ಸದ್ಯ ಹಣ ಪಾವತಿಯಾಗಿಲ್ಲ ಎಂದು ತಿಳಿಸಿದರು.

 

ಮೃತಪಟ್ಟವರ ಖಾತೆಗೆ ಹಣ ಸಂದಾಯವಾಗುತ್ತಿರುವುದನ್ನು ತಡೆ ಹಿಡಿಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಬೆಂಗಳೂರಿನ ಮುಖ್ಯ ಕಚೇರಿಗೆ ನೇರವಾಗಿ ವರದಿ ಸಲ್ಲಿಸಿದೆ. ಅಲ್ಲಿಂದಲೇ ಈ ಖಾತೆಗಳಿಗೆ ಹಣ ಜಮೆಯಾಗದಂತೆ ಸೂಕ್ತ ಕ್ರಮ ವಹಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ 3,94,709 ಪಡಿತರ ಚೀಟಿಗಳಿದ್ದು, 14,02,667 ಫಲಾನುಭವಿಗಳಿಗೆ 2025ರ ಫೆಬ್ರವರಿಯಿಂದ 2026ರ ಮಾರ್ಚ್ ಅವಧಿಯವರೆಗೆ ಒಟ್ಟು 88,736 ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ವಿತರಿಸಲಾಗಿದೆ. ಯೋಜನೆಯಡಿ ಸಾರಿಗೆ ವೆಚ್ಚ, ಹಮಾಲಿ ದರ, ವಿತರಕರ ಕಮಿಷನ್ ಹಾಗೂ ರಾಜ್ಯ ಸರ್ಕಾರವು ಕೇಂದ್ರದಿಂದ ಖರೀದಿಸಿದ ಅಕ್ಕಿಯ ದರ ಸೇರಿದಂತೆ ಒಟ್ಟು ರೂ.232.93 ಕೋಟಿ ವೆಚ್ಚ ಮಾಡಲಾಗಿದೆ. ಇದಕ್ಕೂ ಮುನ್ನ 2023ರ ಜುಲೈನಿಂದ 2024ರ ಡಿಸೆಂಬರ್‍ವರೆಗಿನ ಅವಧಿಯಲಿ 5 ಕೆ.ಜಿ. ಅಕ್ಕಿಯ ಬದಲು ನೇರ ನಗದು ವರ್ಗಾವಣೆ ಮೂಲಕ ಒಟ್ಟು ರೂ. 371.94 ಕೋಟಿ ಹಣವನ್ನು ಪಾವತಿಸಲಾಗಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ ಮಾಹಿತಿ ನೀಡಿದರು.

 

ಕೆಲವು ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ದಲ್ಲಾಳಿಗಳು ಶಾಮೀಲಾಗಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಹಾಗೂ ಆಟೋಗಳಲ್ಲಿ ಸಾಗಿಸುತ್ತಿರುವ ದೂರುಗಳು ಕೇಳಿಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು.  ಪ್ರತಿಯೊಂದು ನ್ಯಾಯಬೆಲೆ ಅಂಗಡಿಯ ಮುಂದೆ ಅಕ್ಕಿ ಅಕ್ರಮ ಮಾರಾಟ ಅಥವಾ ಕಳ್ಳಸಾಗಣೆ ಮಾಡಿದರೆ ಆಗುವ ಕಠಿಣ ಶಿಕ್ಷೆ ಮತ್ತು ದಂಡದ ವಿವರಗಳನ್ನು ಸಾರ್ವಜನಿಕರಿಗೆ ತಿಳಿಯುವಂತೆ ಪ್ರದರ್ಶಿಸಬೇಕು ಎಂದು ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ನಿರ್ದೇಶನ ನೀಡಿದರು.

 

ಜಿಲ್ಲೆಯಲ್ಲಿ ಶಕ್ತಿ ಯೋಜನೆ ಆರಂಭವಾದಾಗಿನಿಂದ ಜೂನ್ 2023 ರಿಂದ ಮೇ 2026 ರವರೆಗೆ ಒಟ್ಟು 6,45,61,152 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಟ್ಟು ರೂ.82,36,27,946 ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಕಳೆದ ಮೇ ತಿಂಗಳ ಅಂಕಿ-ಅಂಶಗಳನ್ನು ಗಮನಿಸಿದಾಗ, ಪ್ರತಿ ದಿನ ಸರಾಸರಿ 66,150 ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣಿಸುತ್ತಿದ್ದಾರೆ. ದಿನಕ್ಕೆ ಸರಾಸರಿ ರೂ.33 ರಿಂದ 34 ಲಕ್ಷ ವೆಚ್ಚವಾಗುತ್ತಿದ್ದು, ಪ್ರತಿ ತಿಂಗಳು ಸುಮಾರು 2.29 ಕೋಟಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ತಿಂಗಳಿಗೆ ರೂ.11.66 ಕೋಟಿ ವೆಚ್ಚವಾಗುತ್ತಿದೆ ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮಾಹಿತಿ ನೀಡಿದರು.

 

ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡುವಾಗ ಶಾಲೆ ಅಥವಾ ಕಾಲೇಜಿಗೆ ದಾಖಲಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನಕಲಿ ಪ್ರಮಾಣಪತ್ರಗಳನ್ನು ತಂದು ಉಚಿತ ಪಾಸ್ ಪಡೆಯುವುದಕ್ಕೆ ಆಸ್ಪದ ನೀಡಬಾರದು. ದಾಖಲಾತಿ ರಿಜಿಸ್ಟರ್ ಮಾಹಿತಿ, ಶುಲ್ಕ ಪಾವತಿಸಿದ ರಸೀದಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಆರ್.ಶಿವಣ್ಣ ಹೇಳಿದರು.
ಜಿಲ್ಲೆಯಲ್ಲಿ ಯುವ ನಿಧಿ ಯೋಜನೆಯಡಿ 10,275 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದು, ಏಪ್ರಿಲ್‍ವರೆಗೆ ರೂ.32.09 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದು ಉದ್ಯೋಗಾಧಿಕಾರಿ ರವಿಚಂದ್ರ ತಿಳಿಸಿದರು.

 

ಇದೇ ಸಂದರ್ಭದಲ್ಲಿ ಉಚಿತ ಬಸ್‍ಪಾಸ್‍ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಸಭೆಯಲ್ಲಿ ಜಿ.ಪಂ.ಸಿಇಓ ಡಾ.ಎಸ್.ಆಕಾಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಖಾದಿ ರಮೇಶ್, ಸದಸ್ಯರಾದ ಹೆಚ್.ಟಿ. ಹನುಮಂತಪ್ಪ, ಅಬ್ದುಲ್ ಶಾ ವಲಿ, ಪ್ರಕಾಶ್, ಗದ್ದಿಗೆ ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ಇಂದಿರಾ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now