ಬೆಂಗಳೂರು: ಬೆಳಗ್ಗೆಯಿಂದಾನೇ ಬೆಂಗಳೂರು ನಗರದಲ್ಲಿ ವಾತಾವರಣ ಕೂಲ್ ಕೂಲ್ ಎನಿಸಿದೆ. ಮಂಜು ಕವಿದ ನಗರದಲ್ಲಿ ಬಿಸಿಲು ಕಾಣಿಸುತ್ತಿಲ್ಲ. ಇದೀಗ ಮಳೆ ಬರುವ ಮಜನ್ಸೂಚನೆಯನ್ನು ನೀಡಿದೆ ಹವಮಾನ ಇಲಾಖೆ. ಚಳಿಗಾಲ ಶುರುವಾಗಿದೆ, ಬೆಳೆಕೊಯ್ಲು ಆರಂಭವಾಗಿರುವಾಗ ಮಳೆ ಬಂದರೆ ರೈತನ ಪಾಡೇನು ಎಂಬಂತ ಚಿಂತೇಗೀಡಾಗಿದೆ. ಇದಕ್ಕೆಲ್ಲ ಕಾರಣ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದು.
ಹೌದು, ಬಂಗಾಳಕೊಲ್ಲಿಯಲ್ಲಿ ತೀವ್ರವಾಗಿ ವಾಯುಭಾರ ಕುಸಿತವಾದ ಹಿನ್ನೆಲೆ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಮಳೆರಾಯ ಆರ್ಭಟಿಸಲು ಶುರು ಮಾಡಿದೆ. ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ. ನಾಳೆ ತಮಿಳುನಾಡು ಭಾಗದಲ್ಲಿ ಗುಡುಗು ಸಹಿತ ಚದುರಿದ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ.
ಇದರ ಪರಿಣಾಮ ಕೇರಳ, ಕರ್ನಾಟಕ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಎರಡು ದಿನಗಳ ಕಾಲ ಮಳೆ ಬೀಳಲಿದೆ. ಇಂದು ಬೆಳಗ್ಗೆಯಿಂದಾನೇ ಚಳಿ ಜಾಸ್ತಿಯಾಗಿತ್ತು. ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಮನೆ ಮಾಡಿದೆ. ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಆರಂಭದಲ್ಲಿಯೇ ಇಷ್ಟೊಂದು ಚಳಿಯಾಗುತ್ತಿದ್ದು, ಮಳೆಯೂ ಬಿದ್ದರೆ ಚಳಿಯ ವಾತಾವರಣ ಇನ್ನಷ್ಟು ಜೋರಾಗಲಿದೆ. ಕೊರೆಯುವ ಚಳಿಯಲ್ಲಿ ಮಳೆಯಲ್ಲೂ ಹೆಣಗಾಡಬೇಕಾಗಿದೆ. ಇನ್ನು ಈ ಸಮಯಕ್ಕೆ ಮಳೆ ಬಂದರೆ ಬೆಳೆ ಹಾಳಾಗುತ್ತದೆ. ಇದರಿಂದ ರೈತರಿಗೆ ನಷ್ಟ ಉಂಟಾಗಲಿದೆ ಎಂದು ರೈತರು ಆತಂಕ ಪಡುತ್ತಿದ್ದಾರೆ. ಆದರೆ ಎರಡು ದಿನಗಳ ಕಾಲ ಮಳೆಯ ಪ್ರಮಾಣ ಎಷ್ಟಿದೆ ಎಂಬುದನ್ನ ನೋಡಬೇಕಿದೆ.