ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಕೆಎನ್ ರಾಜಣ್ಣ ಅವರು ಮತಕಳ್ಳತನದ ಬಗ್ಗೆ ಒಂದೇ ಒಂದು ಮಾತನಾಡಿ, ಅಲ್ಲಿಂದ ಸಚಿವ ಸ್ಥಾನವನ್ನೇ ಕಳೆದುಕೊಂಡರು. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರು, ಸಚಿವ ಸ್ಥಾನದಿಂದ ಉಳಿಸಿಕೊಳ್ಳುವುದಕ್ಕೆ ಆಗಿಲ್ಲ. ಇದೀಗ ರಾಜಣ್ಣ ಡಿನ್ನರ್ ಅರೆಂಜ್ ಮಾಡಿದ್ದಾರೆ. ರಾಜಕಾರಣದಲ್ಲಿ ಡಿನ್ನರ್ ಮೀಟಿಂಗ್ ಅಂದ್ರೆ ಸಹಜವಾಗಿಯೇ ಕುತೂಹಲ ಹೆಚ್ಚಾಗಿರುತ್ತದೆ. ಡಿನ್ನರ್ ಮೀಟಿಂಗ್ ನೆಪದಲ್ಲಿ ಏನೆಲ್ಲಾ ಚರ್ಚೆಗಳಾಗಬಹುದು ಎಂಬ ಕುತೂಹಲವು ಇರುತ್ತದೆ. ಇದೀಗ ರಾಜಣ್ಣ ಅವರ ಔತಣಕೂಟದ ಬಗ್ಗೆ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಪದೇ ಪದೇ ಹೇಳ್ತೀನಿ ಔತಣಕೂಟ ಅಲ್ಲ. ಅವರು ಮನೆಗೆ ಊಟಕ್ಕೆ ಕರೆದಿದ್ದಾರೆ. ನೀವೂ ಸ್ವಲ್ಪ ಹಿಂದೆ ತೆಗೆದು ನೋಡಿ ತುಮಕೂರಿಗೆ ಬಂದಾಗ, ಇದು ಐದನೇ ಸಲವೇನೋ ತುಮಕೂರಿಗೆ ಬರ್ತಾ ಇರೋದು. ನನಗೆ ಗೊತ್ತಿರುವಂತೆ ಮೂರು ಬಾರಿ ರಾಜಣ್ಣ ಅವರ ಮನೆಯಲ್ಲಿಯೇ ಊಟ ಮಾಡಿದ್ದಾರೆ. ಅವರು ಆಹ್ವಾನ ಮಾಡ್ತಾರೆ, ಮುಖ್ಯಮಂತ್ರಿಗಳು ಒಪ್ಪಿಕೊಂಡರೆ ಎಲ್ಲಾ ಜಿಲ್ಲೆಯ ನಾಯಕರು ಹೋಗ್ತೇವೆ.
ಈ ಬಾರಿಯೂ ಕೂಡ ಮುಖ್ಯಮಂತ್ರಿಗಳು ರಾಜಣ್ಣ ಅವರು ಊಟಕ್ಕೆ ಕರೆದಿದ್ದಾರೆ ಹೋಗೋಣ್ವಾ ಅಂತ ಕೇಳಿದ್ರು. ನನ್ನನ್ನು ಸಹ ಕೇಳಿದ್ರು. ಸರಿ ಹೋಗೋಣಾ ಅಂದೆ. ಅದರಲ್ಲೇನು ರಾಜಕೀಯ ಚರ್ಚೆ ಆಗುವುದಿಲ್ಲ. ಊಟ ಮಾಡೋದು ಬರೋದು ಅಷ್ಟೇ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಚರ್ಚೆ, ಸಚಿವ ಸಂಪುಟ ಪುನರ್ ರಚನೆ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಔತಣಕೂಟವೂ ಕುತೂಹಲ ಹುಟ್ಟು ಹಾಕಿದ್ದು, ಏನೆಲ್ಲಾ ಚರ್ಚೆಗಳು ಆಗಬಹುದು ಎಂಬ ಪ್ರಶ್ನೆಗಳು ಜನರಲ್ಲಿವೆ.
