ಮಂಗಳೂರು.ಜುಲೈ.19: ರಾಜ್ಯದ ಸಾರ್ವಜನಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇನ್ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಮತ್ತು ಶಾಲಾ ಆವರಣದಲ್ಲಿರುವ ಕ್ಯಾಂಟೀನ್ಗಳಲ್ಲಿ ಜಂಕ್ ಫುಡ್ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರಿನ ವೆನ್ಲಾಕ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಪ್ರಮುಖ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ಗಳ ಬಳಕೆ ಹೆಚ್ಚಾಗುತ್ತಿದ್ದು, ಇದು ಕ್ಯಾನ್ಸರ್ ಹಾಗೂ ಮೂತ್ರಪಿಂಡದಂತಹ ಗಂಭೀರ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡಲು 1 ರಿಂದ 10ನೇ ತರಗತಿಯವರೆಗಿನ ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ನಿಯಮ ತರಲಾಗುತ್ತಿದೆ. ಬದಲಿಗೆ ಕ್ಯಾಂಟೀನ್ಗಳಲ್ಲಿ ಕನಿಷ್ಠ ದರದಲ್ಲಿ ಕೇವಲ ಪೌಷ್ಟಿಕ ಹಾಗೂ ಆರೋಗ್ಯಕರ ಆಹಾರವನ್ನು ಮಾತ್ರ ಮಾರಾಟ ಮಾಡಲು ಸೂಚಿಸಲಾಗುವುದು ಎಂದರು. ಆಹಾರ ಮತ್ತು ಸುರಕ್ಷತಾ ಕಾಯ್ದೆಯನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಮಾಲ್ ಸೇರಿದಂತೆ ವಿವಿಧೆಡೆ ಗುಣಮಟ್ಟ ರಹಿತ ಆಹಾರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಚಿಕಿತ್ಸೆ ಉಚಿತವಾದರೂ ಡಿಸ್ಚಾರ್ಜ್ ವೇಳೆ ಸಿಗಲಿದೆ ‘ಶೂನ್ಯ ಮೊತ್ತದ ಬಿಲ್’!
ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಅದಕ್ಕಾಗಿ ಸರ್ಕಾರ ಎಷ್ಟು ವೆಚ್ಚ ಭರಿಸುತ್ತಿದೆ ಎಂಬ ಮಾಹಿತಿ ರೋಗಿಗಳಿಗೆ ತಿಳಿಯುತ್ತಿರಲಿಲ್ಲ. ಇದೀಗ ಪಾರದರ್ಶಕತೆ ತರಲು ಹೊಸ ಯೋಜನೆಯೊಂದನ್ನು ರೂಪಿಸಲಾಗಿದ್ದು, ರೋಗಿ ಗುಣಮುಖನಾಗಿ ಡಿಸ್ಚಾರ್ಜ್ ಆಗುವಾಗ ಆತನ ಚಿಕಿತ್ಸೆಗೆ ತಗುಲಿದ ಒಟ್ಟು ವೆಚ್ಚದ ಸಮಗ್ರ ಬಿಲ್ ನೀಡಲಾಗುತ್ತದೆ. ಆದರೆ ರೋಗಿಯಿಂದ ಯಾವುದೇ ಹಣ ಪಡೆಯುವುದಿಲ್ಲ, ಅದು ಕೇವಲ ಮಾಹಿತಿ ನೀಡುವ ‘ಪಾವತಿ ರಹಿತ ಬಿಲ್’ ಆಗಿರುತ್ತದೆ. ಈ ವಿನೂತನ ವ್ಯವಸ್ಥೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದಲೇ ಪ್ರಾಯೋಗಿಕವಾಗಿ ಆರಂಭಿಸಿ, ಬಳಿಕ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಸಚಿವರು ವಿವರಿಸಿದರು.
ವೈದ್ಯರ ವರ್ಗಾವಣೆ ನಿಯಮಕ್ಕೆ ಶೀಘ್ರದಲ್ಲೇ ತಿದ್ದುಪಡಿ
ಸರ್ಕಾರಿ ಆಸ್ಪತ್ರೆಗಳ ವೈದ್ಯರ ವರ್ಗಾವಣೆಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ನಿಯಮಾವಳಿಗಳಲ್ಲಿ ಮಹತ್ವದ ತಿದ್ದುಪಡಿ ತರಲು ಇಲಾಖೆ ಮುಂದಾಗಿದೆ. ಈ ಕುರಿತು ಸೂಕ್ತ ಪರಮರ್ಶೆ ನಡೆಸಿ ವರದಿ ನೀಡುವಂತೆ ಇಲಾಖೆಯ ಕಾರ್ಯದರ್ಶಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಮುಂದಿನ ವರ್ಗಾವಣೆ ಪ್ರಕ್ರಿಯೆ ಆರಂಭವಾಗುವಷ್ಟರಲ್ಲಿ ಹೊಸ ನಿಯಮವನ್ನು ಜಾರಿಗೆ ತರಲಾಗುವುದು ಎಂದು ಯು.ಟಿ. ಖಾದರ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಜೊತೆಗೆ ಬೆಂಗಳೂರಿನಲ್ಲಿರುವ ಆಹಾರ ಗುಣಮಟ್ಟ ತಪಾಸಣಾ ಲ್ಯಾಬ್ ಅನ್ನು ಪಿಪಿಪಿ ಮಾದರಿಯಲ್ಲಿ ಸುಧಾರಿಸಿ, ಸುಪ್ರೀಂಕೋರ್ಟ್ ಒಪ್ಪುವಂತಹ ಅತ್ಯುನ್ನತ ಗುಣಮಟ್ಟದ ವರದಿ ನೀಡುವ ಸಂಸ್ಥೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








