ಬಾಗಲಕೋಟೆ: ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಭರ್ಜರಿ ಮತಯಾಚನೆಯೂ ನಡೆಯುತ್ತಿದೆ. ಇದರ ನಡುವೆ ವಿಶೇಷವಾದ ಸಂಗತಿಯೊಂದು ನಡೆದಿದೆ. ಬಿಜೆಪಿ ಅಭ್ಯರ್ಥಿಯ ಸಹೋದರ ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡಿರೋದು. ಹೌದು ಮೇಟಿ ಅವರ ನಿಧನದ ಬಳಿಕ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ನಿಂದ ಉಮೇಶ್ ಮೇಟಿ ಹಾಗೂ ಬಿಜೆಪಿಯಿಂದ ವೀರಣ್ಣ ಚರಂತಿ ಮಠ ಅವರು ಸ್ಪರ್ಧೆ ಮಾಡಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಚರಂತಿ ಮಠ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಅವರು ತಮ್ಮ ಸಹೋದರರನ್ನು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಕೂಡ ಪ್ರಚಾರಕ್ಕೆ ಬರ್ತಾ ಇದ್ದಾರೆ. ಅವರು ಬಂದ್ರೆ ಇನ್ನು ಹೆಚ್ಚಿನ ಮತಗಳು ಬರಬಹುದು ಎಂಬ ನಿರೀಕ್ಷೆ ಇದೆ. ಮೇಟಿ ಅವರ ಮಗನ ಬಗ್ಗೆ ಕೂಡ ಎಲ್ಲರಿಗೂ ಒಲವಿದೆ. ಹೀಗಾಗಿ ಅವರೇ ಗೆಲ್ತಾರೆ ಎಂಬ ನಂಬಿಕೆಯೂ ಇದೆ. ನಾವೂ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಬಿಜೆಪಿಯವರು ಏನು ಮಾಡದೆಯೇ ಡಂಗೂರ ಹೊಡೆದುಕೊಂಡು ಓಡಾಡ್ತಾರೆ. ನಾವ್ಯಾಕೆ ಮಾಡಿನೂ ಹೇಳಬಾರದು. ಜನನೇ ನಮಗೆ ವೋಟ್ ಹಾಕ್ತೀವಿ ಅಂತ ಹೇಳ್ತಾ ಇದ್ದಾರೆ. ನೀವೇನ್ ಬರ್ಬೇಡ್ರೀ ನಾವ್ ವೋಟ್ ಹಾಕ್ತೀವಿ ಅಂತಿದ್ದಾರೆ.
ಬಿಜೆಪಿಯವರು ಕೂಡ ವಂಶಪಾರಪರ್ಯವಾಗಿಯೇ ಟಿಕೆಟ್ ನೀಡ್ತಾರೆ. ಉತ್ತಮವಾದ ಲೀಡ್ ನಲ್ಲಿ ನಾವೂ ಗೆಲ್ಲುತ್ತೇವೆ ಎಂಬ ಮಾತನ್ನ ಮಲ್ಲಿಕಾರ್ಜುನ ಚರಂತಿಮಠ ಅವರು ಹೇಳಿದ್ದಾರೆ. ಅಣ್ಣ ಬಿಜೆಪಿಯಿಂದ ನಿಂತರೆ ತಮ್ಮ ಕಾಂಗ್ರೆಸ್ ಪಕ್ಷದಲ್ಲಿರುವ ಕಾರಣ, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡ್ತಾ ಇದ್ದಾರೆ.
















