ಬೆಂಗಳೂರು: ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಜೋರಾಗಿಯೇ ಕಾಣುತ್ತಿದೆ. ಅದರಲ್ಲೂ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ಮುನಿಸಿಕೊಂಡವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹಿರಿಯ ನಾಯಕರೇ ಬೇಸರ ಮಾಡಿಕೊಂಡಿದ್ದು, ಇದೀಗ ಹಿರಿಯರ ಮುನಿಸನ್ನು ಶಮನ ಮಾಡುವ ಕೆಲಸದಲ್ಲಿ ವಿಜಯೇಂದ್ರ ಅವರು ಬ್ಯುಸಿಯಾಗಿದ್ದಾರೆ.
ಅದರ ಭಾಗವಾಗಿಯೇ ಇಂದು ವಿಜಯೇಂದ್ರ ಅವರು, ರಮೇಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಸವಿದಿದ್ದಾರೆ. ಅದರ ನಡುವೆಯೇ 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಭೇಟಿ, ಮಾತುಕತೆ ಬಳಿಕ ಮಾತನಾಡಿದ ವಿಜಯೇಂದ್ರ ಅವರು, ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದೇನೆ. ಅವರಲ್ಲಿ ಸಣ್ಣ ಪುಟ್ಟ ಗೊಂದಲಗಳಿತ್ತು. ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ನನ್ನ ಕರ್ತವ್ಯ ಎಂದಿದ್ದಾರೆ.
ಇದೆ ವೇಳೆ ಲೋಕಸಭಾ ಚುನಾವಣೆ ಬಗ್ಗೆ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವುದು ನಮ್ಮ ಜವಬ್ದಾರಿಯಾಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರು ಕೂಡ ಕೆಲಸ ಮಾಡುತ್ತೇನೆ ಎಂದಿದ್ದಾರೆ. ನಮ್ಮೆಲ್ಲರ ಗುರಿ ಒಂದೇ. ಮತ್ತೆ ದೇಶದಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವುದು. ಈ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಅವರಿಗೆ ವಿಜಯೇಂದ್ರ ಅವರು ಅಧ್ಯಕ್ಷರಾಗಿದ್ದು, ಒಪ್ಪಿಗೆ ಇಲ್ಲ. ತಮಗಿಂತ ಚಿಕ್ಕವರ ಜೊತೆಗೆ ಕೆಲಸ ಮಾಡುವುದು ಹೇಗೆ. ಹಿರಿಯರನ್ನು ನೇಮಕ ಮಾಡಿದ್ದರೆ ನಮಗೆ ಯಾವುದೇ ಬೇಸರವಾಗುತ್ತಿರಲಿಲ್ಲ ಎಂದು ಮನಸ್ಸಿನ ಬೇಸರವನ್ನು ಹೊರ ಹಾಕಿದ್ದರು. ಇದೀಗ ವಿಜಯೇಂದ್ರ ಅವರೇ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಸಮಾಧಾನ ಮಾಡಿದ್ದಾರೆ.