ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಡಿ. 27 : ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರ ಬಿಡುಗಡೆಗೆ ಮತ್ತು ಅವರ ಒಳಿತಿಗಾಗಿ ಕಾರ್ಯಕರ್ತನೊಬ್ಬ ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸಿ ಚಿತ್ರದುರ್ಗದಿಂದ ಶಬರಿಮಲೆ ಸನ್ನಿದಾನಕ್ಕೆ ಸುಮಾರು 840 ಕಿಲೋಮೀಟರ್ ಪಾದಯಾತ್ರೆಯನ್ನ ನಡೆಸಿ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರ ಒಳಿತಿಗಾಗಿ ಪ್ರಾರ್ಥಿಸಿದ್ದಾನೆ.

ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ನಿವಾಸಿ ಹಾಗೂ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರ ಅಪ್ಪಟ ಅಭಿಮಾನಿಯಾಗಿ ಗುರುತಿಸಿಕೊಂಡಿದ ಬಸವರಾಜ್ (ಕೊಕೊನಟ್) ರವರು ನವೆಂಬರ್ 29ರಂದು ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಪಾದಯಾತ್ರೆಯನ್ನ ಆರಂಭಿಸಿ ಡಿಸೆಂಬರ್ 26 ಕ್ಕೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನವನ್ನು ತಲುಪಿದ್ದಾರೆ.
ಶಾಸಕ ಕೆ.ಸಿ ವೀರೇಂದ್ರಪಪ್ಪಿಯವರ ಒಳಿತಿಗಾಗಿ ಸತತ ಒಂದು ತಿಂಗಳ ಪಾದಯಾತ್ರೆಯ ಮೂಲಕ ಶಬರಿ ಮಲೆಯ ಸನ್ನಿಧಾನವನ್ನು ತಲುಪಿದ್ದೇನೆ, ಶಾಸಕರಿಗೆ ಬಂದಿರುವ ಕಷ್ಟಗಳು ನಿರ್ಮೂಲನೆಯಾಗಲಿ, ಶಾಸಕರು ಯಾವಾಗಲೂ ಬಡವರ ಪರವಾಗಿ ಅವರ ಅಭಿವೃದ್ಧಿಯ ಪರವಾಗಿ ನಿಲ್ಲುತ್ತಾರೆ, ಅವರಿಲ್ಲದೆ ಕ್ಷೇತ್ರ ಅಭಿವೃದ್ಧಿಯಾಗಲು ಕುಂಠಿತವಾಗಿದೆ, ಅವರು ಈ ಒಂದು ಪ್ರಕರಣದಿಂದ ಮುಕ್ತಿ ಹೊಂದಲಿ ಎಂದು ಅಯ್ಯಪ್ಪನಲ್ಲಿ ಬೇಡಿಕೊಳ್ಳುವೆ ಜೊತೆಗೆ ಅವರಿಗೆ ಯಾವಾಗಲೂ ಒಳಿತಾಗಲಿ ಎನ್ನುವ ಅಭಿಲಾಷೆಯಿಂದ ಈ ಒಂದು ಭಕ್ತಿ ಪೂರ್ವ ಪಾದಯಾತ್ರೆಯನ್ನ ಶಾಸಕರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರ ಸಹಕಾರದಿಂದ ಹಮ್ಮಿಕೊಂಡಿದ್ದೇನೆ. ರಸ್ತೆಯ ಉದ್ದಕ್ಕೂ ಕೂಡ ಶಾಸಕರ ಭಾವಚಿತ್ರವನ್ನು ಪ್ರದರ್ಶಿಸುವುದರ ಮೂಲಕ ಅವರ ಒಳಿತಿಗಾಗಿ ನಾನು ಕಾಲ್ನಡಿಗೇಯನ್ನ ಆರಂಭಿಸಿ ಶಬರಿಮಲೆಗೆ ತಲುಪಿದ್ದೇನೆ, ಶಾಸಕರು ಪ್ರಕರಣದಿಂದ ಹೊರಬಂದ ಮೇಲೆ ಅಯ್ಯಪ್ಪ ಸ್ವಾಮಿಯವರಿಗೆ ವಿಶೇಷ ಭಕ್ತಿ ಪೂಜೆಯನ್ನು ಸಲ್ಲಿಸಲಾಗುವುದು ಎಂದು ಅಭಿಮಾನಿ ಬಸವರಾಜ್ (ಕೊಕೊನಟ್) ಅವರು ತಿಳಿಸಿದ್ದಾರೆ.


















