ಇಂದಿನ ಕಾಲದಲ್ಲಿ ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಭಾರೀ ಹೊರೆ ಆಗುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ‘ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY)’ ಜನಸಾಮಾನ್ಯರಿಗೆ ಮಹತ್ವದ ನೆರವಾಗುತ್ತಿದೆ.ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ವಿಮಾ ಯೋಜನೆ ಎಂದೇ ಪರಿಗಣಿಸಲ್ಪಡುವ ಈ ಯೋಜನೆಯಡಿ ಅರ್ಹ ಕುಟುಂಬಗಳಿಗೆ ದೇಶದ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ವಾರ್ಷಿಕವಾಗಿ ₹5 ಲಕ್ಷದವರೆಗೆ ಉಚಿತ ನಗದು ರಹಿತ ಚಿಕಿತ್ಸೆಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಇತ್ತೀಚಿನ ಅಪ್‌ಡೇಟ್ ಪ್ರಕಾರ, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆದಾಯವನ್ನು ಪರಿಗಣಿಸದೆ ಹೆಚ್ಚುವರಿ ₹5 ಲಕ್ಷದವರೆಗೆ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆಯಡಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಔಷಧಿ ಹಾಗೂ ಡಯಾಗ್ನೋಸ್ಟಿಕ್ ವೆಚ್ಚಗಳು ಸಂಪೂರ್ಣವಾಗಿ ಒಳಗೊಂಡಿವೆ.ಹೃದಯ ರೋಗ, ಕ್ಯಾನ್ಸರ್, ಕಿಡ್ನಿ ವೈಫಲ್ಯ ಸೇರಿದಂತೆ ಗಂಭೀರ ಕಾಯಿಲೆಗಳಿಗೂ ಈ ಯೋಜನೆ ವ್ಯಾಪ್ತಿಯಲ್ಲಿ ಚಿಕಿತ್ಸೆ ಲಭ್ಯವಿದೆ. ಅಲ್ಲದೆ, ಕರ್ನಾಟಕ ಸೇರಿದಂತೆ ದೇಶದ ಯಾವುದೇ ರಾಜ್ಯದಲ್ಲಿರುವ ನೋಂದಾಯಿತ ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಸಾಮಾಜಿಕ-ಆರ್ಥಿಕ-ಜಾತಿ ಗಣತಿ (SECC 2011) ಪಟ್ಟಿಯಲ್ಲಿ ಹೆಸರು ಹೊಂದಿರುವವರು, ಬಿಪಿಎಲ್ ಕುಟುಂಬಗಳು, ಭೂಹೀನ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಗೆ ಅರ್ಹರಾಗಿದ್ದಾರೆ. ಆದರೆ ಸರ್ಕಾರಿ ನೌಕರರು ಹಾಗೂ ಹೆಚ್ಚು ಆದಾಯ ಹೊಂದಿರುವವರು ಸಾಮಾನ್ಯವಾಗಿ ಈ ಯೋಜನೆಗೆ ಒಳಪಡುವುದಿಲ್ಲ.ಆಯುಷ್ಮಾನ್ ಕಾರ್ಡ್ ಪಡೆಯಲು ಸರ್ಕಾರ ಆನ್‌ಲೈನ್ ಸೌಲಭ್ಯವನ್ನು ಕೂಡ ಒದಗಿಸಿದ್ದು, ಮೊಬೈಲ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್ ಅಥವಾ ‘Ayushman App’ ಮೂಲಕ ಲಾಗಿನ್ ಆಗಿ, ಆಧಾರ್ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಿ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಮೊಬೈಲ್ ಸಂಖ್ಯೆ ಅರ್ಜಿಗೆ ಅಗತ್ಯವಾಗಿದ್ದು, ಅರ್ಜಿ ಸಲ್ಲಿಸಿದ ಬಳಿಕ 24 ಗಂಟೆಗಳೊಳಗೆ ಕಾರ್ಡ್ ಅನುಮೋದನೆ ಸಾಧ್ಯತೆ ಇದೆ.ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಈ ಯೋಜನೆ ಜನಸಾಮಾನ್ಯರಿಗೆ ಸಂಜೀವಿನಿಯಾಗಿದ್ದು, ಇನ್ನೂ ಕಾರ್ಡ್ ಮಾಡಿಸದವರು ತಕ್ಷಣವೇ ಅರ್ಜಿ ಸಲ್ಲಿಸಲು ಸರ್ಕಾರ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ 14555 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
















