ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (KASS) ಗೆ ಸಂಬಂಧಿಸಿದಂತೆ ಸರ್ಕಾರವು ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ಯೋಜನೆಯಡಿ ನಗದು ರಹಿತ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ, ಬಾಕಿ ಇರುವ ಎಲ್ಲಾ ನೌಕರರ ಮತ್ತು ಅವರ ಕುಟುಂಬದವರ ವಿವರಗಳನ್ನು HRMS ತಂತ್ರಾಂಶದಲ್ಲಿ ದಾಖಲಿಸಲು ಜುಲೈ 15, 2026 ರವರೆಗೆ ಅಂತಿಮ ಗಡುವು ನೀಡಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಸೇವಾ ನಿಯಮಗಳು-3) ಉಪ ಕಾರ್ಯದರ್ಶಿ ಎಸ್.ಆರ್. ಶಿವಶಂಕರ್ ಅವರು ಈ ಕುರಿತು ರಾಜ್ಯದ ಎಲ್ಲಾ ಇಲಾಖಾ ಮುಖ್ಯಸ್ಥರು ಹಾಗೂ ಡಿಡಿಒ (DDO) ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅರ್ಹ ಅವಲಂಬಿತರಿಗೆ ನಗದು ರಹಿತ ಚಿಕಿತ್ಸೆ ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಹಿಂದೆ ನೀಡಿದ ಅವಕಾಶದಂತೆ ಲಿಖಿತವಾಗಿ ಒಪ್ಪಿಗೆ ಸೂಚಿಸದ (Opt-out ಮಾಡದ) ನೌಕರರನ್ನು ಸ್ವಯಂಚಾಲಿತವಾಗಿ ಈ ಯೋಜನೆಗೆ ಒಳಪಡಿಸಲಾಗಿದೆ.ಯೋಜನೆಯಡಿ ಒಟ್ಟು 3,76,955 ನೌಕರರು ಒಳಪಟ್ಟಿದ್ದು, 23,081 ನೌಕರರು ಯೋಜನೆಯಿಂದ ಹೊರಗುಳಿದಿದ್ದಾರೆ. ಒಳಪಟ್ಟಿರುವ ನೌಕರರ ಪೈಕಿ ಕೇವಲ 1,79,339 ನೌಕರರ ವಿವರಗಳು ಮಾತ್ರ ಇದುವರೆಗೆ HRMS ತಂತ್ರಾಂಶದಲ್ಲಿ ನೋಂದಣಿಯಾಗಿವೆ.ಇನ್ನುಳಿದ 1,97,616 ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರ ವಿವರಗಳನ್ನು ತಂತ್ರಾಂಶದಲ್ಲಿ ನಮೂದಿಸುವುದು ಬಾಕಿ ಉಳಿದಿದೆ.

ಅರ್ಹ ನೌಕರರ ಮತ್ತು ಅವರ ಅವಲಂಬಿತರ ವಿವರಗಳು HRMS ನಲ್ಲಿ ಲಭ್ಯವಿಲ್ಲದ ಕಾರಣ, ಅವರಿಗೆ ವಿಶಿಷ್ಟ ಗುರುತಿನ ಚೀಟಿ (KASS_ID ಮತ್ತು Unique Dependent ID) ಸೃಜನೆಯಾಗುತ್ತಿಲ್ಲ. ಇದರಿಂದಾಗಿ ನೌಕರರು ನೋಂದಾಯಿತ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ, ಬಾಕಿ ಇರುವ ಎಲ್ಲಾ 1,97,616 ನೌಕರರ ಹಾಗೂ ಅವರ ಕುಟುಂಬದ ಸದಸ್ಯರ ಸಂಪೂರ್ಣ ವಿವರಗಳನ್ನು ಸಂಬಂಧಪಟ್ಟ ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿಗಳು (DDOs) ತಪ್ಪದೇ 15.07.2026ರ ಒಳಗಾಗಿ HRMS ತಂತ್ರಾಂಶದಲ್ಲಿ ದಾಖಲಿಸಬೇಕೆಂದು ಆದೇಶಿಸಿದೆ. ಅವಧಿ ಮುಗಿಯುವುದರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ, ನೌಕರರು ಆಸ್ಪತ್ರೆಗಳಲ್ಲಿ ಸುಲಭವಾಗಿ ನಗದು ರಹಿತ ಸೌಲಭ್ಯ ಪಡೆಯುವಂತೆ ಕ್ರಮ ಕೈಗೊಳ್ಳಲು ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಸೂಚಿಸಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















