ಸುದ್ದಿಒನ್, ಚಿತ್ರದುರ್ಗ, ನವೆಂಬರ್. 14: ಮಹಾನಗರ ಗ್ಯಾಸ್ ಹೆಸರಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಹಣ ದೋಚುವ ನೂತನ ವಂಚನಾ ಜಾಲವೊಂದು ಸಕ್ರಿಯವಾಗಿದ್ದು, ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಚಿತ್ರದುರ್ಗ ನಗರ ಪೊಲೀಸರು ಮುನ್ನೆಚ್ಚರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ನಗರದಲ್ಲಿ ವಂಚಕರು ಸಾರ್ವಜನಿಕರಿಗೆ ವಾಟ್ಸಪ್ ಸಂದೇಶ ಅಥವಾ ನೇರ ಕರೆ ಮಾಡಿ, ತಾವು ಮಹಾನಗರ ಗ್ಯಾಸ್ ಕಚೇರಿಯಿಂದ ಮಾತನಾಡುತ್ತಿರುವುದಾಗಿ ನಂಬಿಸುತ್ತಾರೆ. ನಿಮ್ಮ ಮನೆಯ ಗ್ಯಾಸ್ ಪೈಪ್ಲೈನ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಬೆದರಿಸುತ್ತಾರೆ. ಬಳಿಕ ಸಂಪರ್ಕ ಮುಂದುವರಿಸುವ ನೆಪದಲ್ಲಿ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳುತ್ತಾರೆ.
ಸಾರ್ವಜನಿಕರನ್ನು ಸುಲಭವಾಗಿ ನಂಬಿಸುವ ಉದ್ದೇಶದಿಂದ ಈ ವಂಚಕರು ತಮ್ಮ ವಾಟ್ಸಪ್ ಡಿಪಿಯಲ್ಲಿ ಮಹಾನಗರ ಗ್ಯಾಸ್ ನ ಅಧಿಕೃತ ಲೋಗೋವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಯಾವುದೇ ಕಾರಣಕ್ಕೂ ಇಂತಹ ಕರೆ ಅಥವಾ ಸಂದೇಶಗಳಿಗೆ ಸಾರ್ವಜನಿಕರು ಪ್ರತಿಕ್ರಿಯಿಸಬಾರದು. ವಂಚಕರ ಮಾತು ನಂಬಿ ನಿಮ್ಮ ಬ್ಯಾಂಕ್ ಖಾತೆ ವಿವರ, ಒಟಿಪಿ ಅಥವಾ ಯಾವುದೇ ವೈಯಕ್ತಿಕ ಮಾಹಿತಿಯನ್ನು ನೀಡಿದರೆ, ಕೂಡಲೇ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿ ಹಣವನ್ನು ದೋಚುತ್ತಾರೆ. ಹೀಗಾಗಿ ಇಂತಹ ಕರೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿ ಮತ್ತು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಚಿತ್ರದುರ್ಗ ನಗರ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.












