ನವದೆಹಲಿ : ನೌಕರರ ಭವಿಷ್ಯ ನಿಧಿ (PF) ಕುರಿತಂತೆ ಉದ್ಯೋಗದಾತರಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರಮುಖ ಸೂಚನೆಯೊಂದನ್ನು ನೀಡಿದೆ. ಅಕ್ಟೋಬರ್ 2026ರ ತಿಂಗಳ ಪಿಎಫ್ ಕಾಂಟ್ರಿಬ್ಯೂಷನ್ (ವಂತಿಕೆ) ಹಾಗೂ ಇಸಿಆರ್ (ECR) ಫೈಲಿಂಗ್ ಅನ್ನು ನವೆಂಬರ್ 15ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ತಿಳಿಸಿದೆ.
ಈ ಕುರಿತು ನವೆಂಬರ್ 12ರಂದು ತನ್ನ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯ ಮೂಲಕ ಇಪಿಎಫ್ಒ ಪ್ರಕಟಣೆ ಹೊರಡಿಸಿದೆ. ನಿಗದಿತ ಗಡುವಿನೊಳಗೆ ಈ ಪ್ರಕ್ರಿಯೆ ಮುಗಿಸಿದರೆ, ನೌಕರರ ಪಿಎಫ್ ಖಾತೆಗಳಿಗೆ ಸಕಾಲದಲ್ಲಿ ಹಣ ಜಮೆಯಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಇಸಿಆರ್ (ECR) ಎಂದರೇನು?
ಪ್ರತಿ ತಿಂಗಳು ಉದ್ಯೋಗದಾತರು ತಮ್ಮ ನೌಕರರ ವೇತನ ಮತ್ತು ಪಿಎಫ್ ವಂತಿಕೆಯ ವಿವರಗಳನ್ನು ಆನ್ಲೈನ್ನಲ್ಲಿ ಇಪಿಎಫ್ಒಗೆ ಸಲ್ಲಿಸಬೇಕು. ಈ ಪ್ರಕ್ರಿಯೆಯನ್ನು ಎಲೆಕ್ಟ್ರಾನಿಕ್ ಚಲನ್-ಕಮ್-ರಿಟರ್ನ್ (ECR) ಎಂದು ಕರೆಯಲಾಗುತ್ತದೆ. ಇದರಲ್ಲಿ ನೌಕರರ ವಿವರ, ಅವರ ವೇತನ ಮತ್ತು ಪಿಎಫ್ ಅಡಿಯಲ್ಲಿ ಪಾವತಿಸಬೇಕಾದ ಮೊತ್ತದ ಸಂಪೂರ್ಣ ಮಾಹಿತಿ ಇರುತ್ತದೆ. ಇಸಿಆರ್ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಪಿಎಫ್ ಮೊತ್ತವನ್ನು ಕೂಡ ಪಾವತಿಸಬೇಕಾಗುತ್ತದೆ.
📢 नियोक्ता ध्यान दें!
अक्टूबर 2026 वेतन माह का ECR और देय EPF अंशदान 15 नवंबर तक जमा करना सुनिश्चित करें।
समय पर अनुपालन से कर्मचारियों के खातों में अंशदान का समय पर क्रेडिट होगा और विलंब शुल्क से भी बचाव होगा।#EPFO #EPFOWithYou #HumHainNa #ECR pic.twitter.com/3IXT3jQJxt
— EPFO (@officialepfo) November 12, 2026
ಕೊನೆಯ ಕ್ಷಣದವರೆಗೆ ಕಾಯಬೇಡಿ
ಇಪಿಎಫ್ಒ ನಿಯಮಗಳ ಪ್ರಕಾರ, ಅಕ್ಟೋಬರ್ ತಿಂಗಳ ಇಸಿಆರ್ ಫೈಲಿಂಗ್ ಜೊತೆಗೆ ಪಿಎಫ್ ಮೊತ್ತವನ್ನು ನವೆಂಬರ್ 15, 2026ರೊಳಗೆ ಪಾವತಿಸಬೇಕು. ಒಂದು ವೇಳೆ ಗಡುವು ಮೀರಿದರೆ, ನಿಯಮಾನುಸಾರ ಹೆಚ್ಚುವರಿ ಬಡ್ಡಿ ಮತ್ತು ದಂಡವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ಕೊನೆಯ ದಿನದವರೆಗೆ ಕಾಯದೆ ಮುಂಚಿತವಾಗಿಯೇ ಈ ಪ್ರಕ್ರಿಯೆ ಮುಗಿಸುವಂತೆ ಉದ್ಯೋಗದಾತರಿಗೆ ಸೂಚಿಸಲಾಗಿದೆ.
ಗಮನಿಸಬೇಕಾದ ಅಂಶಗಳು
ಇಸಿಆರ್ ಫೈಲ್ ಮಾಡುವ ಮುನ್ನ ನೌಕರರ ಹೆಸರು, ವೈಯಕ್ತಿಕ ವಿವರಗಳು, ವೇತನದ ಮಾಹಿತಿ ಹಾಗೂ ಪಿಎಫ್ ಲೆಕ್ಕಾಚಾರಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.
ಏನೇ ತಪ್ಪುಗಳಿದ್ದರೂ ಮೊದಲೇ ಸರಿಪಡಿಸಿಕೊಳ್ಳಿ.
ಕೊನೆಯ ಗಳಿಗೆಯಲ್ಲಿ ಇಪಿಎಫ್ಒ ವೆಬ್ಸೈಟ್ನಲ್ಲಿ ತಾಂತ್ರಿಕ ದೋಷಗಳು (ಸರ್ವರ್ ಸಮಸ್ಯೆ) ಎದುರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಗಡುವಿಗೂ ಮುನ್ನವೇ ಫೈಲಿಂಗ್ ಮತ್ತು ಪಾವತಿ ಎರಡೂ ಪೂರ್ಣಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.















