ಧಾರವಾಡ: ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಖಾಯಂ ಶಿಕ್ಷಕರು, ಮುಖ್ಯಶಿಕ್ಷಕರು ಹಾಗೂ ಕಚೇರಿಗಳ ಬೋಧಕೇತರ ಸಿಬ್ಬಂದಿಯ ದೈನಂದಿನ ಹಾಜರಾತಿಯನ್ನು ಇನ್ಮುಂದೆ ‘ಕರ್ತವ್ಯ’ (Kartavya – KAAMS) ಮೊಬೈಲ್ ಅಪ್ಲಿಕೇಶನ್ ಮೂಲಕವೇ ಕಡ್ಡಾಯವಾಗಿ ದಾಖಲಿಸಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಆದರೆ ಈ ನಿಯಮ ಜಾರಿಯಲ್ಲಿ ಉದಾಸೀನತೆ ಹಾಗೂ ಕರ್ತವ್ಯಲೋಪ ತೋರಿರುವ ಹಿನ್ನೆಲೆಯಲ್ಲಿ, ಧಾರವಾಡ ವಿಭಾಗದ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಅವರು ವಿಭಾಗದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರಿಗೆ (ಆಡಳಿತ) ಕಾರಣ ಕೇಳಿ ಅಧಿಕೃತ ನೋಟಿಸ್ (ಶೋಕಾಸ್ ನೋಟಿಸ್) ಜಾರಿ ಮಾಡಿದ್ದಾರೆ.
ರಾಜ್ಯ ಸರ್ಕಾರದ ಡಿಜಿಟಲ್ ಆಡಳಿತ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ತಂತ್ರಾಂಶವನ್ನು ಜಾರಿಗೆ ತರಲಾಗಿದೆ. ಶಿಕ್ಷಕರು ಮತ್ತು ಸಿಬ್ಬಂದಿಗಳು ತಾವು ಕರ್ತವ್ಯ ನಿರ್ವಹಿಸುವ ಸ್ಥಳ, ತರಬೇತಿ ಕೇಂದ್ರ ಅಥವಾ ಮೌಲ್ಯಮಾಪನ ಕೇಂದ್ರಗಳಲ್ಲಿ ಪ್ರತಿದಿನ 2 ಬಾರಿ (In Time ಮತ್ತು Out Time) ಕಡ್ಡಾಯವಾಗಿ ಈ ಆ್ಯಪ್ ಮೂಲಕವೇ ಹಾಜರಾತಿ ದಾಖಲಿಸಬೇಕು. ಈ ಆ್ಯಪ್‌ನಲ್ಲಿ ದಾಖಲಾಗುವ ಹಾಜರಾತಿಯನ್ನು ಮಾತ್ರವೇ ವೇತನ ಹಾಗೂ ಇತರ ಸೌಲಭ್ಯಗಳಿಗೆ ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಧಾರವಾಡ ಇಲಾಖಾ ವ್ಯಾಪ್ತಿಯ ಒಟ್ಟು 53,416 ಸಿಬ್ಬಂದಿಗಳ ಪೈಕಿ 49,579 ಸಿಬ್ಬಂದಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಇನ್ನು 3,837 ಸಿಬ್ಬಂದಿಗಳು ನೋಂದಣಿ ಮಾಡಿಕೊಳ್ಳುವುದು ಬಾಕಿ ಇದೆ. ಗದಗ: ಶೇ. 99.36 ರಷ್ಟು ನೋಂದಣಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಉತ್ತರ ಕನ್ನಡ/ಶಿರಸಿ: ಶೇ. 97.37 ರಷ್ಟು ಸಾಧನೆ ಮಾಡಿದೆ, ಹಾವೇರಿ: ಶೇ. 94.97 ರಷ್ಟು ಪ್ರಗತಿ ಕಂಡಿದೆ, ಬಾಗಲಕೋಟೆ: ಶೇ. 94.53 ರಷ್ಟು ನೋಂದಣಿಯಾಗಿದೆ, ಧಾರವಾಡ: ಶೇ. 92.11 ರಷ್ಟು ಸಾಧನೆಯಾಗಿದೆ, ಬೆಳಗಾವಿ/ಚಿಕ್ಕೋಡಿ: ಶೇ. 90.44 ರಷ್ಟು ಸಿಬ್ಬಂದಿ ನೋಂದಾಯಿಸಿಕೊಂಡಿದ್ದಾರೆ, ವಿಜಯಪುರ: ಶೇ. 88.64 ರಷ್ಟು ನೋಂದಣಿಯೊಂದಿಗೆ ಅತ್ಯಂತ ಹಿನ್ನಡೆ ಸಾಧಿಸಿದೆ (ಇಲ್ಲಿ ಇನ್ನೂ 1,055 ಸಿಬ್ಬಂದಿ ನೋಂದಣಿ ಬಾಕಿ ಇದೆ).
ಸರ್ಕಾರದ ಆದೇಶಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವಲ್ಲಿ ಉದಾಸೀನತೆ ತೋರಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಪರ ಆಯುಕ್ತರು, “ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1957ರನ್ವಯ ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಜರುಗಿಸಬಾರದು?” ಎಂದು ಉಪನಿರ್ದೇಶಕರನ್ನು ಪ್ರಶ್ನಿಸಿದ್ದಾರೆ. ನೋಟಿಸ್ ತಲುಪಿದ 5 ದಿನಗಳ ಒಳಗಾಗಿ ಲಿಖಿತ ಸಮರ್ಥನೆ ಮತ್ತು ಪ್ರಗತಿ ವರದಿಯನ್ನು ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದ್ದು, ತಪ್ಪಿದಲ್ಲಿ ಕಾನೂನು ರೀತ್ಯಾ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








