ಕಬ್ಬು ಬೆಳೆಗಾರ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಂಧಾನ ಯಶಸ್ವಿಯಾಗಿದ್ದು, ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ನಿಗದಿಪಡಿಸಿದ ಬಳಿಕ, ಅದರ ಆಧಾರದಲ್ಲಿ ರೈತರಿಗೆ ಪಾವತಿಸಬೇಕಾದ ಕಬ್ಬಿನ ದರದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ರೈತರು ಹಾಗೂ ಕಾರ್ಖಾನೆಗಳ ಮಾಲೀಕರು ಇನ್ನೆರಡು ದಿನಗಳಲ್ಲಿ ತಮ್ಮ ಅಂತಿಮ ನಿಲುವು ಪ್ರಕಟಿಸಲಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬೆಳಗಾವಿಯ ಸುವರ್ಣ ಸೌಧ ಹಾಗೂ ಸರ್ಕ್ಯೂಟ್ ಹೌಸ್ನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜೊತೆಗೆ ಇಡೀ ದಿನ ಐದು ಸುತ್ತಿನ ಸರಣಿ ಸಭೆಗಳನ್ನು ನಡೆಸಲಾಯಿತು. ಈ ಸಭೆಯಲ್ಲಿ 9 ಮಂತ್ರಿಗಳು ಸೇರಿ 70 ಜನ ಶಾಸಕರು ಸುದೀರ್ಘ ಚರ್ಚೆ ನಡೆಸಿದ್ದಾರೆ. 80 ಕಾರ್ಖಾನೆಗಳ ಪೈಕಿ 79 ಕಾರ್ಖಾನೆ ಮಾಲೀಕರು ಭಾಗಿಯಾಗಿದ್ದು, ರೈತರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳೀದರು.
ರೈತರು ಕೇಂದ್ರ ಸಚಿವರ ಜತೆ ಚರ್ಚೆ ಮಾಡಿದ್ದು, ರೈತರಿಗೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಕಬ್ಬಿನ ಎಂಎಸ್ಪಿ ನಿಗದಿ ಬಳಿಕ ಕಾರ್ಖಾನೆಗಳು ರೈತರಿಗೆ ಎಷ್ಟು ದರ ನೀಡಬೇಕು ಎಂದು ತೀರ್ಮಾನಕ್ಕೆ ಬರಲಾಗಿದೆ. ಇದಕ್ಕೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ. ರೈತರು ಉಳಿಯಬೇಕು, ಕಾರ್ಖಾನೆಯೂ ಉಳಿಯಬೇಕು. ಸರ್ಕಾರಕ್ಕೆ ರೈತರ ಬದುಕು ಮುಖ್ಯ. ರೈತರು ಎರಡು ದಿನ ಕಾಲಾವಕಾಶ ಕೇಳಿದ್ದಾರೆ. ಅವರು ತಮ್ಮಲ್ಲೇ ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಿದ್ದಾರೆ. ರೈತರು ಹಾಗೂ ಕಾರ್ಖಾನೆ ಮಾಲೀಕರು ಒಪ್ಪಂದದ ಹತ್ತಿರಕ್ಕೆ ಬಂದಿದ್ದಾರೆ. ನಾವು ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಕೇಂದ್ರ ಸರ್ಕಾರದ ಜೊತೆಗೆ ಅವರೂ ಮಾತನಾಡುತ್ತಾರೆ, ನಾವೂ ಮಾತನಾಡುತ್ತೇವೆ ಎಂದು ತಿಳಿಸಿದರು.
ಸದ್ಯ ಈ ಹೋರಾಟ ಸುಖಾಂತ್ಯ ಕಂಡಿದೆ. ನಾವು ರೈತರಿಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದು, ಯಾವುದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಬದ್ಧನಾಗಿದ್ದೇನೆ. ಕೇಂದ್ರ ಸಚಿವರು ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂಬ ಭರವಸೆ ರೈತರಿಗಿದೆ. ಅದಕ್ಕೆ ನಮ್ಮ ಬೆಂಬಲವೂ ಇದೆ. ರೈತರಿಲ್ಲದೆ ನಾವಿಲ್ಲ, ನಾವಿಲ್ಲದೆ ರೈತರಿಲ್ಲ. ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ ಎಂದು ಹೇಳಿದ್ದಾರೆ.











