ಐಚಿ-ನಗೋಯಾ:ಭಾರತದ ದೂರದ ಓಟದ ಕ್ರೀಡಾಪಟು ಸಾವನ್ ಬರ್ವಾಲ್ 2026ರ ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪುರುಷರ ಮ್ಯಾರಥಾನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ, ಈ ವಿಭಾಗದಲ್ಲಿ ಭಾರತಕ್ಕೆ 44 ವರ್ಷಗಳ ಬಳಿಕ ಮೊದಲ ಪದಕ ತಂದುಕೊಟ್ಟ ಹಿರಿಮೆಗೆ ಪಾತ್ರರಾಗಿದ್ದಾರೆ. 1982ರ ಬಳಿಕ ಏಷ್ಯನ್ ಗೇಮ್ಸ್ ಮ್ಯಾರಥಾನ್‌ನಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದಾಗಿದೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ ಸಾವನ್ ಬರ್ವಾಲ್ 2 ಗಂಟೆ 11 ನಿಮಿಷ 37 ಸೆಕೆಂಡುಗಳಲ್ಲಿ (2:11:37) ಗುರಿ ಮುಟ್ಟಿದರು. ಇದು ಅವರ ವೈಯಕ್ತಿಕ ಗರಿಷ್ಠ ಪ್ರದರ್ಶನವಾಗಿದ್ದು, ನೂತನ ರಾಷ್ಟ್ರೀಯ ದಾಖಲೆಯನ್ನೂ ನಿರ್ಮಿಸಿದೆ. ಅಂತಿಮ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡ ಜಪಾನ್‌ನ ಯಮಶಿತಾ ಚಿನ್ನದ ಪದಕ ಮುಡಿಗೇರಿಸಿಕೊಂಡರು.
🥈 44 YEARS. ONE MAN. ONE HISTORIC SILVER. 🇮🇳
Sawan Barwal has won India's first Asian Games marathon medal since 1982.
⏱️ 2:11:37, a NEW NATIONAL RECORD 🔥
And he's the first Indian ever to win one outside India. Every marathon medal before today was won at home in Delhi:
🏅… pic.twitter.com/vAWZ3cAF3z— Athletics Federation of India (@afiindia) September 26, 2026
ಆರಂಭದಿಂದಲೇ ಮುಂಚೂಣಿಯಲ್ಲಿದ್ದ ಬರ್ವಾಲ್
ಓಟದ 10 ಕಿ.ಮೀ ನಂತರ ಅಗ್ರ ಓಟಗಾರರ ಜತೆಯಲ್ಲೇ ಸಾಗಿದ ಬರ್ವಾಲ್, 21 ಕಿ.ಮೀ ಹಂತದಲ್ಲಿ (ಅರ್ಧ ಮ್ಯಾರಥಾನ್) 1:05:54 ಸಮಯದೊಂದಿಗೆ ಎರಡನೇ ಸ್ಥಾನ ಪಡೆದು ಕೆಲಕಾಲ ಮುನ್ನಡೆ ಸಾಧಿಸಿದ್ದರು. 30 ರಿಂದ 35 ಕಿ.ಮೀ ಹಂತದವರೆಗೆ ಜಪಾನ್‌ನ ಯಮಶಿತಾ ಹಾಗೂ ಚೀನಾದ ಹಾನ್ ಅವರೊಂದಿಗೆ ಬರ್ವಾಲ್ ಅಗ್ರ ತ್ರಯರ ಗುಂಪಿನಲ್ಲಿದ್ದರು.
36ನೇ ಕಿಲೋಮೀಟರ್ ತಲುಪಿದಾಗ ಯಮಶಿತಾ 20-30 ಮೀಟರ್‌ಗಳಷ್ಟು ಮುನ್ನಡೆ ಪಡೆದುಕೊಂಡರೆ, ಬರ್ವಾಲ್ ದ್ವಿತೀಯ ಸ್ಥಾನವನ್ನು ಯಶಸ್ವಿಯಾಗಿ ಕಾಯ್ದುಕೊಂಡು ಅಂತಿಮ ಗೆರೆಯವರೆಗೂ ಬೆಳ್ಳಿಯ ಸ್ಥಾನವನ್ನು ಬಿಟ್ಟುಕೊಡಲಿಲ್ಲ. ಈ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಓಟಗಾರ ಕಾರ್ತಿಕ್ ಕರ್ಕೇರಾ 17ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಕಳೆದ ಏಪ್ರಿಲ್‌ನಲ್ಲಿ ರೋಟೆರ್‌ಡ್ಯಾಮ್‌ನಲ್ಲಿ ನಡೆದ ‘ಎನ್‌ಎನ್ ಮ್ಯಾರಥಾನ್’ನಲ್ಲಿ ಶಿವನಾಥ್ ಸಿಂಗ್ ಅವರ 48 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಬರ್ವಾಲ್ ಮುರಿದಿದ್ದರು. ಇದೀಗ ಏಷ್ಯನ್ ಗೇಮ್ಸ್‌ನಲ್ಲೂ ಮಿಂಚಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.












