ವಿಶೇಷ ಲೇಖನ :
ಶಶಿಧರ್ ರಾವ್
ಸಾಫ್ಟ್ವೇರ್ ಡೆವಲಪ್ಮೆಂಟ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ನವೋದ್ಯಮ, ಸೈಬರ್ ಸೆಕ್ಯೂರಿಟಿ ಹಾಗೂ ಉನ್ನತ ಶಿಕ್ಷಣ ತಜ್ಞರು ಮತ್ತು ಸಲಹೆಗಾರರು, ಬೆಂಗಳೂರು. ಮೊ : 9108320131

ಸುದ್ದಿಒನ್
ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಥವಾ ಕೃತಕ ಬುದ್ಧಿವಂತಿಕೆ ಎಂಬುದು ಈಗ ಅಬಾಲ ವೃದ್ಧರಾದಿಯಾಗಿ ಎಲ್ಲರ ಬಾಯಲ್ಲಿಯೂ ಹರಿದಾಡುತ್ತಿರುವ ಪದದ್ವಯ. ಇದೀಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ, ಆದರೆ ಅದಕ್ಕೂ ಮೊದಲೇ ತನ್ನ ಪ್ರಾಬಲ್ಯದ ಸಾಧ್ಯ ವ್ಯಾಪ್ತಿಯನ್ನು ಜಗಜ್ಜಾಹೀರು ಮಾಡಿರುವ ಈ ತಂತ್ರಜ್ಞಾನದ ಬಗ್ಗೆ ಕುತೂಹಲದಿಂದ ಮನುಷ್ಯ ಸಂಕುಲ ಜಗತ್ತಿನಾದ್ಯಂತ ದೃಷ್ಟಿ ನೆಟ್ಟಿದೆ.
ಮನುಷ್ಯನ ಸಂಪೂರ್ಣ ನಿಯಂತ್ರಣದ ಅವಶ್ಯಕತೆಯೇ ಇಲ್ಲದೇ, ಭಾಗಶಃ ನಿಯಂತ್ರಣದೊಂದಿಗೆ ಅಥವಾ ಅದರ ಅವಶ್ಯಕತೆಯೂ ಇಲ್ಲದೇ ಮನುಷ್ಯನ ಬುದ್ಧಿಮತ್ತೆಯ ಬಹುಪಾಲು ಅನುಕರಣೆಯಂತೆ, ಮನುಷ್ಯರು ನಿರ್ವಹಿಸಬೇಕಾದ ಕೆಲಸಗಳನ್ನು ಕೆಲವೊಂದು ಸಂದರ್ಭದಲ್ಲಿ ಮನುಷ್ಯರಿಗಿಂತಲೂ ಅನೇಕ ಪಟ್ಟು ಹೆಚ್ಚಿನ ನಿಖರ, ಕೇಂದ್ರಿತ ಅಥವಾ ವಿಸ್ತೃತವಾಗಿ ಕಾರ್ಯನಿರ್ವಹಿಸಬಲ್ಲ ತಂತ್ರಜ್ಞಾನ ವ್ಯವಸ್ಥೆಯೇ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಥವಾ ಕೃತಕ ಬುದ್ಧಿವಂತಿಕೆ.

ತಂತ್ರಜ್ಞಾನವು ಸ್ವಯಂ ನಿರ್ಧಾರಗಳನ್ನು ಕೈಗೊಂಡು ಕಾರ್ಯನಿರ್ವಹಿಸಲು ಅದಕ್ಕೆ ಅಪಾರ ಡೇಟಾ ಟ್ರೈನಿಂಗ್ ನಡೆಸಲಾಗುತ್ತದೆ. ವಿಭಿನ್ನ ಸಾಧ್ಯತೆಗಳ ಡೇಟಾವನ್ನು ಟ್ರೈನ್ ಮಾಡುತ್ತಾ, ವಿಭಿನ್ನ ಸಂದರ್ಭಗಳಲ್ಲಿ ಯಾವ ರೀತಿಯಾದ ಔಟ್ಪುಟ್ ನೀಡಬೇಕು ಅಥವಾ ನಿರ್ಧಾರ ಕೈಗೊಳ್ಳುವಿಕೆಯನ್ನು ಮಾಡಬೇಕು ಎಂಬುದರ ಕುರಿತಾಗಿ ಆ ಅಪ್ಲಿಕೇಶನ್ ಗೆ ತರಬೇತಿಯ ಸರಣಿಯನ್ನು ನಡೆಸಲಾಗುತ್ತದೆ ಹಾಗೂ ಅದರ ಮೂಲಕ ಸಿಸ್ಟಮ್ ಆಕ್ಯುರಸಿ ಹಾಗೂ ಪ್ರಿಸಿಷನ್ (ನಿಖರತೆ ಹಾಗೂ ಸ್ಪಷ್ಟತೆ) ಅನ್ನು ಸಾಧಿಸುತ್ತಾ ಹೋಗಿ, ಒಂದು ಹಂತದಲ್ಲಿ ಮನುಷ್ಯನ ಕೆಲಸವನ್ನು ತಾನೇ ಮಾಡಬಹುದಾದ ಪ್ರಾವೀಣ್ಯತೆಯನ್ನು ಪಡೆಯುತ್ತದೆ.
ಉದಾಹರಣೆಗೆ ಸಂಪೂರ್ಣ ಸ್ವಯಂ ಚಾಲಿತ / ಚಾಲಕ ರಹಿತ ವಾಹನಗಳು, ರೋಬೋಟಿಕ್ ಸರ್ಜರಿ, ಕಾಲ್ – ಚಾಟ್ ಸಪೋರ್ಟ್ ಸರ್ವಿಸಸ್, ಜನರೇಟಿವ್ ಎ.ಐ., ಸ್ವಯಂ ಚಾಲಿತ ಕಾರ್ಖಾನೆ / ಉದ್ಯಮ ನಿಯಂತ್ರಣಾ ವ್ಯವಸ್ಥೆ, ಸ್ವಯಂ ಚಾಲಿತ ಡ್ರೋನ್ ಗಸ್ತು ವ್ಯವಸ್ಥೆ, ಆಟೋಮ್ಯಾಟಿಕ್ ಮನೆ / ಕಛೇರಿ / ಮಾಲ್ ವಿದ್ಯುತ್ ನಿಯಂತ್ರಣಾ ವ್ಯವಸ್ಥೆ, ಸ್ವಯಂ ಚಾಲಿತ ಟ್ರಾಫಿಕ್ ಸಿಗ್ನಲ್ ಮ್ಯಾನೇಜ್ಮೆಂಟ್ ವ್ಯವಸ್ಥೆ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆಧಾರಿತ ಬೋಧಕರು – ಸುದ್ದಿ ಓದು ವ್ಯವಸ್ಥೆ, ಸೋಶಿಯಲ್ ಮೀಡಿಯಾ ಹಾಗೂ ಆನ್ಲೈನ್ ವೀಕ್ಷಣಾ ಸಲಹೆ ಮತ್ತಿತರ ಅಸಂಖ್ಯ ಉದಾಹರಣೆಗಳು ಈ ತಂತ್ರಜ್ಞಾನದ ಉಪಯೋಗದ ನಿಟ್ಟಿನಲ್ಲಿ ಕೊಡಬಹುದು.
ಇದರ ಅತಿದೊಡ್ಡ ಸವಾಲುಗಳಲ್ಲಿ ಒಂದೇನೆಂದರೆ, ಜ್ಞಾನ ಹಾಗೂ ಅನುಭವದ ದೃಷ್ಟಿಯಿಂದ ತಂತ್ರಜ್ಞಾನವು ಮನುಷ್ಯರಂತೆ ಅಥವಾ ಮನುಷ್ಯರಿಗಿಂತಲೂ ಉತ್ತಮವಾಗಿ ನಿರ್ವಹಣೆ ಮಾಡಬಹುದಾದರೂ, ಮನುಷ್ಯನು ಯಾವ ಭಾವನೆಗಳನ್ನು ಅನ್ವಯಿಸಿ ಕರ್ತವ್ಯ ನಿರ್ವಹಣೆಯನ್ನು ಮಾಡುತ್ತಾನೆಯೋ ಅಂತಹ ಭಾವನಾತ್ಮಕ ವ್ಯಾಪ್ತಿ – ಪರಿಧಿಗಳನ್ನು ಈ ತಂತ್ರಜ್ಞಾನ ಮನುಷ್ಯರಷ್ಟು ಪರಿಗಣಿಸುವುದಿಲ್ಲ. ಮನುಷ್ಯನದ್ದು ಕರ್ತವ್ಯ ನಿರ್ವಹಣೆಯೊಂದಿಗೆ ಆತ್ಮಸಾಕ್ಷಿ ಹಾಗೂ ಭಾವನಾತ್ಮಕ ಪರಿಧಿಗಳೊಂದಿಗೆ ಕಾರ್ಯನಿರ್ವಹಿಸಿದರೆ, ಕೃತಕ ಬುದ್ಧಿವಂತಿಕೆಯದ್ದು ಬಹುಪಾಲು ಯಾಂತ್ರಿಕ ನಿರ್ವಹಣೆ.
ಹೀಗಿದ್ದಾಗ, ಭಾವನೆಗಳ ಬಂಧಕ್ಕೆ ಒಳಪಡದ ಒಂದು ಸ್ವಯಂ ಚಾಲಿತ ತಂತ್ರಜ್ಞಾನವನ್ನು ಸಮಾಜದ ಹಿತಕ್ಕೆ, ವೈಶ್ವಿಕ ಸದ್ಬಳಕೆಗೆ ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡುವ ಸಮೂಹ ಒಂದು ಕಡೆ ಆದರೆ, ಈ ತಂತ್ರಜ್ಞಾನದ ದುರುಪಯೋಗದ ಸಾಧ್ಯತೆಯೂ ಇಲ್ಲದಿಲ್ಲ.
ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳು ಈ ತಂತ್ರಜ್ಞಾನವನ್ನು ಅತ್ಯಂತ ಸಮರ್ಪಕವಾಗಿಯೇ ಉಪಯೋಗಿಸುತ್ತವೆ. ಆದರೆ, ಅದನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳಿಂದಲೂ ನಿರೀಕ್ಷೆ ಮಾಡುವುದು ಕಷ್ಟ.
ಹಾಗಾಗಿ ವಿಶ್ವಸಂಸ್ಥೆಯಂತಹ ಜಾಗತಿಕ ಒಕ್ಕೂಟಗಳಲ್ಲಿ ಇದಕ್ಕೆ ಒಂದು ವೇದಿಕೆ ರಚಿಸಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮತ್ತು ಅದು ಕಾರ್ಯನಿರ್ವಹಿಸಲು ಎಲ್ಲಾ ದೇಶಗಳಿಗೂ ಸಮಾನ ನೀತಿ ಸಂಹಿತಿಯನ್ನು ಅನ್ವಯಿಸಿ ಎಲ್ಲಾ ದೇಶಗಳೂ ಅದರಂತೆ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳುವಿಕೆಯಿಂದ ಜಗತ್ತು ಮುಂದೆ ಎಂದೋ ಒಂದು ದಿನ ಈ ತಂತ್ರಜ್ಞಾನದ ಋಣಾತ್ಮಕ ಉಪಯೋಗದಿಂದ ಆಗಬಹುದಾದ ಬಹುದೊಡ್ಡ ಅಪಾಯವನ್ನು ತಪ್ಪಿಸಬಹುದು.





















