Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಡಿಕೆ ಪೂರೈಕೆ ಕಡಿಮೆ, ಆದರೂ ಏರದ ಧಾರಣೆ! ಬೆಳೆಗಾರರ ನಿರೀಕ್ಷೆಗೆ ತಣ್ಣೀರೆರಚಿದ ಮಾರುಕಟ್ಟೆ

---Advertisement---

ಹೊಸ ಅಡಿಕೆ ಮಾರುಕಟ್ಟೆಗೆ ಬರುವ ಮುನ್ನವೇ ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಬೆಳೆಗಾರರು; ನವೆಂಬರ್‌ನಲ್ಲಿ ಧಾರಣೆ ಬದಲಾಗುತ್ತಾ ಎಂಬ ಕುತೂಹಲ ಉಂಟಾಗಿದೆ‌.ಮಾರುಕಟ್ಟೆಗೆ ಅಡಿಕೆ ಪೂರೈಕೆ ಪ್ರಮಾಣ ಕಡಿಮೆಯಾಗಿದ್ದರೂ ಧಾರಣೆಯಲ್ಲಿ ನಿರೀಕ್ಷಿತ ಏರಿಕೆ ಕಂಡುಬಾರದಿರುವುದು ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ. ಹೊರರಾಜ್ಯಗಳಿಂದಲೂ ಅಡಿಕೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗದಿರುವುದು ಮಾರುಕಟ್ಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಬೆಳೆಗಾರರು ಅಡಿಕೆ ಮಾರಾಟ ಮಾಡದೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಕಳೆದ ವರ್ಷ ಅಡಿಕೆ ತೋಟಗಳಲ್ಲಿ ಕೊಳೆರೋಗ ವ್ಯಾಪಕವಾಗಿ ಕಾಣಿಸಿಕೊಂಡ ಪರಿಣಾಮ ಫಸಲು ತೀವ್ರವಾಗಿ ಕುಸಿದಿತ್ತು. ಹಲವು ತೋಟಗಳಲ್ಲಿ ಅರ್ಧಕ್ಕಿಂತಲೂ ಕಡಿಮೆ ಇಳುವರಿ ದೊರೆತಿತ್ತು. ಇದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರಲ್ಲಿದ್ದ ಅಡಿಕೆ ದಾಸ್ತಾನು ಬಹುತೇಕ ಖಾಲಿಯಾಗಿದೆ. ಹೀಗಾಗಿ ಮಾರುಕಟ್ಟೆಗೆ ಅಡಿಕೆ ಪೂರೈಕೆ ಕಡಿಮೆಯಾಗಲು ಇದು ಪ್ರಮುಖ ಕಾರಣವಾಗಿದೆ.

ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕುಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕೃಷಿ ಬೆಳೆಗಳಿಗೆ ಹಾನಿಯಾಗುತ್ತಿದೆ. ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗದ ಹರಡುವಿಕೆ, ಗಾಳಿಗೆ ಮರಗಳು ಉರುಳುವುದು ಸೇರಿದಂತೆ ಹವಾಮಾನ ವೈಪರೀತ್ಯವೂ ಬೆಳೆಗಾರರ ಆತಂಕವನ್ನು ಹೆಚ್ಚಿಸಿದೆ. ಇದರ ನಡುವೆ ವಿದೇಶಗಳಿಂದ ವಿವಿಧ ಮಾರ್ಗಗಳ ಮೂಲಕ ಅಡಿಕೆ ಆಮದಾಗುತ್ತಿರುವುದು ದೇಶೀಯ ಮಾರುಕಟ್ಟೆಯ ಬೇಡಿಕೆ ಮತ್ತು ಧಾರಣೆಯ ಮೇಲೆ ಪರಿಣಾಮ ಬೀರುತ್ತಿದೆ. ಸ್ಥಳೀಯವಾಗಿ ಪೂರೈಕೆ ಕಡಿಮೆಯಿದ್ದರೂ ಬೆಲೆ ನಿರೀಕ್ಷಿತ ಮಟ್ಟಕ್ಕೆ ಏರದಿರಲು ಹಲವು ಕಾರಣಗಳಿವೆ ಎಂಬುದು ಮಾರುಕಟ್ಟೆ ವಲಯದ ಅಭಿಪ್ರಾಯ.

ಮಾರುಕಟ್ಟೆಯಲ್ಲಿ ಅಡಿಕೆ ಲಭ್ಯತೆ ಕಡಿಮೆಯಾಗಿರುವುದರಿಂದ ಧಾರಣೆ ಗಣನೀಯವಾಗಿ ಏರಬಹುದು ಎಂದು ಬೆಳೆಗಾರರು ನಿರೀಕ್ಷಿಸಿದ್ದರು. ಆದರೆ ಬೇಡಿಕೆಯಲ್ಲಿನ ಮಂದಗತಿಯಿಂದಾಗಿ ಬೆಲೆ ಏರಿಕೆ ನಿರೀಕ್ಷೆಯಂತೆ ಆಗಿಲ್ಲ. ಈಗಾಗಲೇ ಅರ್ಧಕ್ಕಿಂತ ಕಡಿಮೆ ಫಸಲು ಪಡೆದಿರುವ ರೈತರು, ಪ್ರಸ್ತುತ ಧಾರಣೆಯಲ್ಲಿ ತೋಟಗಳ ನಿರ್ವಹಣಾ ವೆಚ್ಚವನ್ನು ಭರಿಸಲು ಹೆಣಗಾಡುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಅಡಿಕೆ ತೋಟಗಳಲ್ಲಿ ಕೊಳೆರೋಗ ವ್ಯಾಪಕವಾಗಿ ಕಾಣಿಸಿಕೊಂಡು ಹೆಚ್ಚಿನ ಪ್ರಮಾಣದ ಫಸಲು ನಷ್ಟವಾಗಿತ್ತು. ಆದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಬಹುತೇಕ ತೋಟಗಳಲ್ಲಿ ಕೊಳೆರೋಗದ ಬಾಧೆ ಅಷ್ಟಾಗಿ ಕಂಡುಬಂದಿಲ್ಲ. ಕೆಲವು ತೋಟಗಳಲ್ಲಿ ಒಂದೆರಡು ಬಾರಿ ಮಾತ್ರ ಬೋರ್ಡೋ ಮಿಶ್ರಣ ಸಿಂಪಡಿಸಲಾಗಿದೆ.ಈ ಬಾರಿ ತೋಟಗಳಲ್ಲಿ ಉತ್ತಮ ಫಸಲು ಕಂಡುಬಂದಿದ್ದು, ಅಡಿಕೆ ಹಣ್ಣಾಗಿ ಉದುರಲು ಆರಂಭಿಸಿದೆ. ಮುಂದಿನ ಒಂದೆರಡು ವಾರಗಳಲ್ಲಿ ಮೊದಲ ಕೊಯ್ಲು ಆರಂಭವಾಗುವ ನಿರೀಕ್ಷೆಯಿದೆ. ಹೊಸ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದ ಬಳಿಕ ವಹಿವಾಟು ಮತ್ತು ಧಾರಣೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.

ಪ್ರಸ್ತುತ ಹೊಸ ಅಡಿಕೆ ಸೀಮಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ಕೆ.ಜಿ.ಗೆ ಸುಮಾರು 350 ರೂ. ಧಾರಣೆ ಇದೆ. ಕಳೆದ ವರ್ಷದ ಅಡಿಕೆಗೆ ಕೆ.ಜಿ.ಗೆ ಸುಮಾರು 480 ರೂ. ಆಸುಪಾಸಿನಲ್ಲಿ ಬೆಲೆ ಇದೆ. ನವೆಂಬರ್‌ನಲ್ಲಿ ಹೊಸ ಅಡಿಕೆ ಪೂರೈಕೆ ಹೆಚ್ಚಾಗುವ ನಿರೀಕ್ಷೆಯಿದ್ದು, ಈ ಸಂದರ್ಭದಲ್ಲಿ ಮಾರುಕಟ್ಟೆ ಧಾರಣೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಕುತೂಹಲ ಬೆಳೆಗಾರರಲ್ಲಿದೆ.ವಿದೇಶಗಳಿಂದ ಅಡಿಕೆ ಆಮದಾಗುತ್ತಿರುವ ವಿಚಾರವಾಗಿ ನಮ್ಮ ನಿಯೋಗ ಕೇಂದ್ರ ಸಚಿವರನ್ನು ಭೇಟಿಯಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತ್ತು. ಇದರ ಪರಿಣಾಮವಾಗಿ ವಿದೇಶಗಳಿಂದ ಅಡಿಕೆ ಆಮದಾಗುವುದು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಸತೀಶ್‌ಚಂದ್ರ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now