ಓಣಂ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸಿಹಿಸುದ್ದಿ ನೀಡಿದೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 20ರಿಂದ 26ರವರೆಗೆ ಬೆಂಗಳೂರಿನಿಂದ ಕೇರಳದ ವಿವಿಧ ನಗರಗಳಿಗೆ 90 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಿಸಲು KSRTC ನಿರ್ಧರಿಸಿದೆ.ಓಣಂ ಹಬ್ಬಕ್ಕಾಗಿ ಬೆಂಗಳೂರಿನಿಂದ ಕೇರಳಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಬಸ್‌ಗಳ ಜೊತೆಗೆ ಟಿಕೆಟ್ ಬುಕ್ಕಿಂಗ್‌ನಲ್ಲೂ ರಿಯಾಯಿತಿ ನೀಡಲಾಗಿದೆ.
ಒಂದೇ ಬಾರಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಂದಿ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದರೆ ಶೇ.5ರಷ್ಟು ರಿಯಾಯಿತಿ ಪಡೆಯಬಹುದು. ಅದೇ ರೀತಿ, ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಟ್ಟಿಗೆ ಟಿಕೆಟ್ ಬುಕ್ ಮಾಡಿದರೆ ರಿಟರ್ನ್ ಜರ್ನಿಗೆ ಶೇ.10ರಷ್ಟು ರಿಯಾಯಿತಿ ಲಭ್ಯವಾಗಲಿದೆ.ಬೆಂಗಳೂರಿನ ಮೈಸೂರು ರಸ್ತೆ ಹಾಗೂ ಶಾಂತಿನಗರ ನಿಲ್ದಾಣಗಳಿಂದ ಕೇರಳದ ಕಣ್ಣೂರು, ಕೋಯಿಕ್ಕೋಡ್, ಎರ್ನಾಕುಲಂ, ಪಾಲಕ್ಕಾಡ್, ತ್ರಿಶೂರ್, ಕೊಟ್ಟಾಯಂ ಹಾಗೂ ತಿರುವನಂತಪುರ ಸೇರಿದಂತೆ ಪ್ರಮುಖ ನಗರಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ.
ಓಣಂ ಹಬ್ಬದ ಬಳಿಕ ಆಗಸ್ಟ್ 30ರಂದು ಕೇರಳದಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗಾಗಿ ವಿಶೇಷ ಬಸ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.ಪ್ರಯಾಣಿಕರು ಆನ್‌ಲೈನ್ ಮೂಲಕ ಅಥವಾ ಕೇರಳ ಸೇರಿದಂತೆ ನೆರೆ ರಾಜ್ಯಗಳ ಪ್ರಮುಖ ನಗರಗಳಲ್ಲಿರುವ KSRTC ಮುಂಗಡ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವಂತೆ ಸಾರಿಗೆ ಸಂಸ್ಥೆ ಸೂಚಿಸಿದೆ.










