ಬೆಂಗಳೂರು: ಬೆಳಗಾವಿ ಈ ಹಿಂದೆ ಮಹಾರಾಷ್ಟ್ರಕ್ಕೆ ಸೇರಿತ್ತು. ಈಗ ಕರ್ನಾಟಕಕ್ಕೆ ಸೇರಿದೆ ಎಂಬ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದು, ಈಗಾಗಲೇ ಎಂಇಎಸ್ ಪುಂಡಾಟವೇ ಜಾಸ್ತಿಯಾಗಿದೆ. ಇಂಥ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಪ್ರಚೋದನೆಗೆ ಕಾರಣವಾಗುತ್ತಾ ಎಂಬ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸಿ ಟಿ ರವಿ ಮಾತನಾಡಿದ್ದು, ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಎಂದರೆ, ಮುಂಚೆ ದೇಶ ಕೆಲವು ಕಾಲ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಕರ್ನಾಟಕ ಮುಂಬೈ ಪ್ರೆಸಿಡೆನ್ಸಿ ಭಾಗವಾಗಿತ್ತು, ಮದ್ರಾಸ್ ಪ್ರೆಸಿಡೆನ್ಸಿ ಭಾಗವಾಗಿತ್ತು, ಹಳೆ ಮೈಸೂರು ಭಾಗಕ್ಕೆ ಸೇರಿತ್ತು. ಹೀಗೆ ಮೂರು ಭಾಗವಾಗಿತ್ತು. ಈಗ ಅವರು ಏನು ಸಂದೇಶ ಕೊಡುವುದಕ್ಕೆ ಹೊರಟಿದ್ದಾರೆ. ಕರ್ನಾಟಕದ ಕೆಲವೊಂದು ಭಾಗ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಸಂದೇಶ ಕೊಡುವುದಕ್ಕೆ ಹೊರಟಿದ್ದಾರೋ ಅಥವಾ ಮಹಾರಾಷ್ಟ್ರದ ಕೆಲವು ಭಾಗ ಕರ್ನಾಟಕಕ್ಕೆ ಸೇರಬೇಕು ಅಂತ ಹೊರಟಿದ್ದಾರೋ..? ಅವರು ಸ್ಪಷ್ಟವಾಗಿ ಇದನ್ನು ಹೇಳಬೇಕು.
ಹಿಂದೆ ಚಾಲುಕ್ಯರ ಕಾಲದಲ್ಲಿ ಮಹಾರಾಷ್ಟ್ರದ ಬಹುತೇಕ ಭಾಗ ಕರ್ನಾಟಕದ ಭೂ ಭಾಗವೇ ಆಗಿತ್ತು. ರಾಷ್ಟ್ರ ಕೂಟರ ಆಳ್ವಿಕೆಯಲ್ಲಿ. ಅವರ ಸಂದೇಶವೇನು, ಸ್ಪಷ್ಟತೆ ಏನು..? ತಾವೂ ಕರ್ನಾಟಕದಲ್ಲಿ ಇರುವುದೇ ಅವರಿಗೆ ಅಸಹನೆ, ಅಸಮಾಧಾನವಿದೆಯೋ..? ಎಂದು ಪ್ರಶ್ನಿಸಿದ್ದಾರೆ.
ಇದೇ ವಿಚಾರಕ್ಕೆ ಶಾಸಕ ಮುನಿರತ್ನ ಮಾತನಾಡಿ, ಅಭಿವೃದ್ಧಿ ಮಾಡುವುದಕ್ಕಂತೂ ಗ್ರಾಂಟ್ ಇಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ಗ್ಯಾರಂಟಿ ಕೊಟ್ಟುಕೊಂಡು ಕೂತವ್ರೆ. ಮೈಂಡ್ ಡೈವರ್ಟ್ ಮಾಡುವುದಕ್ಕೆ ಈ ರೀತಿ ಮಾಡುತ್ತಾರೆ. ಇಷ್ಟು ದಿನ ಮೈಸೂರಿಗೆ ಟಿಪ್ಪು ಹೆಸರು ಅಂತ ತಂದ್ರು. ಈಗ ಅದನ್ನ ಬಿಟ್ರು. ಈಗ ಬೆಳಗಾವಿ ತಂದವ್ರೆ. ಇನ್ನೂ ಸ್ವಲ್ಪ ದಿನ ಬೇರೆಯದ್ದು ತರುತ್ತಾರೆ ಎಂದು ಕಿಡಿಕಾರಿದ್ದಾರೆ.