Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮನೆ ಕಟ್ಟುವವರ ಆಶೋತ್ತರ ಕನಸುಗಳನ್ನು ಈಡೇರಿಸುವಲ್ಲಿ ಆರ್ಕಿಟೆಕ್ಟ್ ಗಳ ಜವಾಬ್ದಾರಿ ದೊಡ್ಡದು : ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ  

---Advertisement---

ಮನೆ ಕಟ್ಟುವವರ ಆಶೋತ್ತರ ಕನಸುಗಳನ್ನು ಈಡೇರಿಸುವಲ್ಲಿ ಆರ್ಕಿಟೆಕ್ಟ್ ಗಳ ಜವಾಬ್ದಾರಿ ದೊಡ್ಡದು : ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 08 : ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮನೆ ಕಟ್ಟುವವರ ಆಶೋತ್ತರ ಕನಸುಗಳನ್ನು ಈಡೇರಿಸುವಲ್ಲಿ ಆರ್ಕಿಟೆಕ್ಟ್‍ಗಳ ಜವಾಬ್ದಾರಿ ದೊಡ್ಡದು ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಇಂಜನಿಯರ್‍ಗಳಿಗೆ ಕರೆ ನೀಡಿದರು.

 

ಚಿತ್ರದುರ್ಗ ಜಿಲ್ಲಾ ಪ್ರಾಕ್ಟಿಸಿಂಗ್ ಆರ್ಕಿಟೆಕ್ಟ್ಸ್ ಮತ್ತು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ   ಕಟ್ಟಡ ಸಾಮಾಗ್ರಿಗಳ ವಸ್ತು ಪ್ರದರ್ಶನ ಉದ್ಗಾಟಿಸಿ ಮಾತನಾಡಿದರು.

ಸಿಡಿಪೇಸ್ ಡ್ರೀಮ್ಡ್ ಬಿಲ್ಡ್-2026 ಆಧುನಿಕ ತಂತ್ರಜ್ಞಾನದ ನಿರೀಕ್ಷೆಗೆ ನಿಮ್ಮ ಅಸೋಸಿಯೇಷನ್ ದಾಪುಗಾಲಿಡುತ್ತಿದೆ. ನೀವುಗಳು ಏರ್ಪಡಿಸಿರುವ ವಸ್ತು ಪ್ರದರ್ಶನವನ್ನು ನೋಡಿದರೆ ಪ್ರತಿಭೆಯಿದೆ ಎನ್ನುವುದು ಗೊತ್ತಾಗುತ್ತದೆ. ಹಳೆ ಕಾಲದ ಸ್ಮಾರಕಗಳು ಆಡಳಿತ ನಡೆಸಿದವರ ಕಣ್ಣ ಮುಂದಿಲ್ಲ. ಪ್ರಾಚೀನ ಭಾರತೀಯ ಪರಂಪರೆಯಲ್ಲಿ ವಾಸ್ತುಶಿಲ್ಪ ಗತಕಾಲದ ಇತಿಹಾಸದ ಸಂಕೇತವಾಗಿ ಉಳಿದುಕೊಂಡಿದೆ. ಆಧುನಿಕ ತಂತ್ರಜ್ಞಾನಕ್ಕೆ ನೀವುಗಳು ಅಪ್‍ಡೇಟ್ ಆಗಿರುವುದು ಸಂತೋಷದ ಸಂಗತಿ ಎಂದು ಶ್ಲಾಘಿಸಿದರು.


ಆರ್ಕಿಟೆಕ್ಟ್‍ಗಳು ಎಳೆಯುವ ರೇಖೆಗಳು ಕಟ್ಟಡದ ರೂಪದಲ್ಲಿ ಮೈದಾಳುತ್ತವೆ. ಆಧುನಿಕ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡು ಮನೆ ಕಟ್ಟುವವರ ಕನಸುಗಳಿಗೆ ಕೈಜೋಡಿಸಿ ಎಂದು ಇಂಜಿನಿಯರ್‍ಗಳಿಗೆ ತಿಳಿಸಿದರು.

 

ಮೂರು ಬಾರಿ ಚಳ್ಳಕೆರೆ ಶಾಸಕರಾಗಿರುವ ಟಿ.ರಘುಮೂರ್ತಿಗೆ ಸಚಿವರನ್ನಾಗಿ ಮಾಡಿ ಎಂದು ನಾನು ಯಾರಿಗೂ ಶಿಫಾರಸ್ಸು ಮಾಡಿಲ್ಲ. ಅವರ ಅಭಿವೃದ್ದಿ ಕೆಲಸಗಳನ್ನು ಗುರುತಿಸಿ ರಾಜ್ಯ ಸರ್ಕಾರ ಮಂತ್ರಿ ಸ್ಥಾನ ನೀಡಿದೆ. ಅಪ್ಪರ್‍ಭದ್ರಾ, ಭರಮಸಾಗರ, ಜಗಳೂರು, ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕುರಿತು ನೂತನ ಸಚಿವರ ಜೊತೆ ಚರ್ಚಿಸಿದ್ದೇನೆ. ಭರಮಸಾಗರದ 43 ಕೆರೆಗಳಲ್ಲಿ 40 ಕೆರೆಗಳಿಗೆ ನೀರು ಬರುತ್ತಿದೆ. ಇಂಜಿನಿಯರ್, ಕಂಟ್ರಾಕ್ಟರ್‍ಗಳು ನೀರಾವರಿ ಯೋಜನೆಯ ಕಾಮಗಾರಿಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿದರೆ ನೀರು ಹರಿದು ಬರ ಪೀಡಿತ ಪ್ರದೇಶ ಚಿತ್ರದುರ್ಗ ಕ್ಷಾಮ ಎಂಬ ಹಣೆ ಪಟ್ಟಿಯಿಂದ ಹೊರ ಬರಲು ಸಹಕಾರಿಯಾಗಲಿದೆ ಎಂದು ಹೇಳಿದರು.

 

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ 5300 ಕೋಟಿ ರೂ.ಗಳಿಗೆ ಬದಲಿಗೆ 6200 ಕೋಟಿ ರೂ.ಗಳನ್ನು ಪಡೆಯಬೇಕು. ಬರದ ನಾಡು ಚಿತ್ರದುರ್ಗ ಭಗೀರಥ ನಾಡಾಗಬೇಕು. ಹಾಗಾಗಿ ನೀವುಗಳು ಆಧುನಿಕ ತಂತ್ರಜ್ಞಾನಕ್ಕೆ ದಾಪುಗಾಲಿಟ್ಟು ಯಶಸ್ವಿಯಾಗಿ ಎಂದು ಆರ್ಕಿಟೆಕ್ಟ್‍ಗಳಿಗೆ ಸ್ವಾಮೀಜಿ ಹರಸಿದರು.

 

ನೂತನ ಸಚಿವ ಟಿ.ರಘುಮೂರ್ತಿ ಮಾತನಾಡಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರ ಸೂಚನೆಯಂತೆ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ವೀಕ್ಷಿಸಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ನಾನು ಮೂರು ಬಾರಿ ಶಾಸಕನಾಗಲು ಇಂಜಿನಿಯರಿಂಗ್ ಪದವಿ ಪಡೆದಿರುವುದು ಒಂದು ಕಾರಣವಿರಬಹುದು. ಮನೆಗಳನ್ನು ಕಟ್ಟಿ ವಿನ್ಯಾಸಗೊಳಿಸುವ ಕೆಲಸವನ್ನು ಇಂಜಿನಿಯರ್‍ಗಳು ಮಾಡುತ್ತೀದ್ದೀರಿ. ಆಧುನಿಕ ವ್ಯವಸ್ಥೆಯಲ್ಲಿ ಇಂತಹ ಕಟ್ಟಡ ಸಾಮಾಗ್ರಿಗಳ ಪ್ರದರ್ಶನ ಮನೆಗಳನ್ನು ಕಟ್ಟುವವರಿಗೆ ಪ್ರಯೋಜನಕಾರಿಯಾಗಲಿದೆ. ಸಿವಿಲ್ ಇಂಜಿನಿಯರ್‍ಗಳ ಮೇಲೆ ಅತ್ಯಂತ ಜವಾಬ್ದಾರಿಯಿದೆ. ಯಾವುದೇ ಒಂದು ಕಟ್ಟಡ, ಡ್ಯಾಂ, ರಸ್ತೆಗಳು ಸುಭದ್ರವಾಗಿರಬೇಕಾದರೆ ನಿಮ್ಮಗಳ ಪಾತ್ರ ಮುಖ್ಯ ಎಂದು ತಿಳಿಸಿದರು.

 

1986 ರಲ್ಲಿ ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರೈಸಿ ಹತ್ತು ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದ್ದೇನೆ. ತದ ನಂತರ ರಾಜಿನಾಮೆ ನೀಡಿ ರಾಜಕೀಯ ಪ್ರವೇಶಿಸಿದೆ. ಇಂಜಿನಿಯರ್‍ಗಳಿಗೆ ಪರಿಶ್ರಮವಿರಬೇಕು. ಗುರಿ ಇದ್ದಾಗ ಮಾತ್ರ ಯಾವುದೇ ರಂಗದಲ್ಲಿಯಾಗಲಿ ಯಶಸ್ಸು ಗಳಿಸಬಹುದು. ಸಾಮಾಜಿಕ ಕಳಕಳಿಯಿಟ್ಟುಕೊಂಡು ಕೆಲಸ ಮಾಡಿ. ಕಲುಷಿತ ರಾಜಕಾರಣದಲ್ಲಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ನನಗೆ ಉತ್ತಮ ಮಾರ್ಗದರ್ಶನ ನೀಡಿ ಪ್ರೇರಣೆಯಾಗಿದ್ದಾರೆಂದು ಸ್ಮರಿಸಿಕೊಂಡರು.

 

ಸಿಡಿಪೇಸ್‍ನ ಸಂಸ್ಥಾಪಕ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ಪ್ರಾಸ್ತಾವಿಕವಾಗಿ ಮಾತನಾಡಿ 2014 ರಲ್ಲಿ ಆರಂಭಗೊಂಡ ಸಿಡಿಪೇಸ್ ಮನೆ ಕಟ್ಟುವವರ ಕನಸುಗಳನ್ನು ಸಾಕಾರಗೊಳಿಸುವ ಉದ್ದೇಶವಿಟ್ಟುಕೊಂಡು ಕೆಲಸ ಮಾಡುತ್ತಿದೆ. ಇದು ನಮ್ಮ ಮೂರನೆ ವಸ್ತು ಪ್ರದರ್ಶನ. ಇಡಿ ರಾಜ್ಯದಲ್ಲಿಯೆ ಇಂತಹ ಅಸೋಸಿಯೇಷನ್ ಎಲ್ಲಿಯೂ ಇಲ್ಲವೆನ್ನುವುದು ಒಂದು ಹೆಗ್ಗಳಿಕೆ ಎಂದರು.

 

ಸಿಡಿಪೇಸ್ ಅಧ್ಯಕ್ಷ ಇಂಜಿನಿಯರ್ ಸಿ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಾಧವ್ ಎಂ.ಪೊಕಾಳೆ, ಎಸ್.ಕೆ.ಸ್ಟೀಲ್ ಮಾರಾಟ ಮುಖ್ಯಸ್ಥ ರಾಜೇಶ್, ಪ್ರದೀಪ್‍ಕುಮಾರ್ ಇವರುಗಳು ವೇದಿಕೆಯಲ್ಲಿದ್ದರು. ಸಿಡಿಪೇಸ್‍ನ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ನಿರ್ದೇಶಕರು, ಇಂಜಿನಿಯರ್‍ಗಳು,ಸ ಮಾದುರಿ ಗಿರೀಶ್, ಜಿ.ಬಿ.ಶೇಖರ್, ಮದೇಹಳ್ಳಿಯ ಶಂಕರಣ್ಣ ಇವರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸವಿತಾ ದಿವಾಕರ್ ಪ್ರಾರ್ಥಿಸಿದರು. ಅರುಣ್‍ಕುಮಾರ್ ಸ್ವಾಗತಿಸಿದರು. ಎನ್.ಶಶಿಧರಗುಪ್ತ, ಉಮೇಶ್ ತುಪ್ಪದ ನಿರೂಪಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now