ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 18 : ಮತದಾರರ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನೆಪದಲ್ಲಿ ಕೇಂದ್ರ ಸರ್ಕಾರ ಇನ್ನು ಐವತ್ತು ವರ್ಷಗಳ ಕಾಲ ಅಧಿಕಾರದಲ್ಲಿರಲು ತಂತ್ರಗಾರಿಕೆ ನಡೆಸುತ್ತಿದೆ ಎಂದು ನ್ಯಾಯವಾದಿ ದಾವಣಗೆರೆಯ ಅನಿಸ್‍ಪಾಷ ತಿಳಿಸಿದರು.

ಶಿರಸಿಯಿಂದ ಚಿತ್ರದುರ್ಗಕ್ಕೆ ಗುರುವಾರ ಆಗಮಿಸಿದ್ದ ಎಸ್.ಐ.ಆರ್. ವಿರೋಧಿ ಜನಜಾಗೃತಿ ಜಾಥ ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗವನ್ನು ಹಿಡಿತದಲ್ಲಿಟ್ಟುಕೊಂಡಿರುವ ಬಿಜೆಪಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಎಸ್.ಐ.ಆರ್.ಮೂಲಕ ಲಕ್ಷಾಂತರ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದು ಹಾಕಿದೆ. 40 ಇ.ವಿ.ಎಂ.ಮೆಷಿನ್‍ಗಳನ್ನು ನಾಶಪಡಿಸಿದೆ. ನಿಜಕ್ಕೂ ಇದು ಪ್ರಜಾಪ್ರಭುತ್ವಕ್ಕೆ ಮಾರಕ. ನೈಜ ಮತದಾರರನ್ನು ಮತಪಟ್ಟಿಯಿಂದ ಡಿಲಿಟ್ ಮಾಡಲು ನಾವುಗಳು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಮತಪಟ್ಟಿಯಲ್ಲಿ ಎರಡೆರಡು ಕಡೆ ಇರುವ ಹೆಸರನ್ನು ತೆಗೆಯಲಿ, ಮೃತಪಟ್ಟವರ ಹೆಸರನ್ನು ಡಿಲಿಟ್ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ. ದುರುದ್ದೇಶದಿಂದ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರತೆಗೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅನಿಸ್‍ಪಾಷ ಸಾರ್ವಜನಿಕರು ಬೇರೆ ಬೇರೆ ಸಂಘಟನೆಗಳವರು ಜಾಥದ ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.
ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಜೆ.ಯಾದವರೆಡ್ಡಿ ಮಾತನಾಡಿ ನುಸುಳುಕೋರರನ್ನು ಪತ್ತೆ ಹೆಚ್ಚುತ್ತೇವೆಂಬ ನೆಪದಲ್ಲಿ ಅರ್ಹ ಮತದಾರರಿಗೆ ಅನ್ಯಾಯ ಮಾಡಬಾರದು. ಎಸ್.ಐ.ಆರ್.ಮೇಲ್ನೋಟಕ್ಕೆ ಚೆನ್ನಾಗಿ ಕಾಣಬಹುದು. ಅಲ್ಪಸಂಖ್ಯಾತರು, ದಲಿತರು, ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಜಗತ್ತಿನ ಯಾವ ದೇಶದಲ್ಲಿಯೂ ಇಂತಹ ಕರಾಳತೆಯಿಲ್ಲ. ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್‍ಕುಮಾರ್ ಆಯ್ಕೆ ಕೂಡ ಅಕ್ರಮ. ಬಿಹಾರ, ಪಶ್ಚಿಮ ಬಂಗಾಳದಲ್ಲಿ ಎಸ್.ಐ.ಆರ್.ಮೂಲಕ ಲಕ್ಷಾಂತರ ಮತದಾರರನ್ನು ಮತಪಟ್ಟಿಯಿಂದ ಡಿಲಿಟ್ ಮಾಡಿರುವ ಕಾರಣಕ್ಕಾಗಿ ಅಲ್ಲಿ ಕೋಮುವಾದಿ ಬಿಜೆಪಿ. ಅಧಿಕಾರ ಹಿಡಿದಿದೆ. ಘನಘೋರ ದುರಂತಕ್ಕೆ ಆಸ್ಪದ ಕೊಡಬಾರದು. ಈ ನಿಟ್ಟಿನಲ್ಲಿ ಸಾರ್ವಜನಿಕರನ್ನು ಎಚ್ಚರಿಸುವ ಉದ್ದೇಶದಿಂದ ಹೊರಟಿರುವ ಜಾಥ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜೂ.20 ರಂದು ಸಮಾವೇಶ ನಡೆಸಲಿದೆ ಎಂದು ಹೇಳಿದರು.
ರೈತ ಮುಖಂಡ ಹೊರಕೇರಪ್ಪ ಮಾತನಾಡುತ್ತ ಕೇಂದ್ರ ಸರ್ಕಾರ ಎಸ್.ಐ.ಆರ್.ಮೂಲಕ ನಾಗರೀಕರ ಮತವನ್ನು ಕಸಿಯಲು ಹೊರಟಿದೆ. ಪ್ರಜಾಪ್ರಭುತ್ವ ವಿರೋಧಿ ಕ್ರಮ ಅನುಸರಿಸುತ್ತಿರುವ ಕೇಂದ್ರ ಬಿಜೆಪಿ. ಸರ್ಕಾರದ ವಿರುದ್ದ ಅನೇಕ ಕಡೆ ಚಳುವಳಿಗಳು ನಡೆಯುತ್ತಿವೆ. ಕೋಮುವಾದಿ ಬಿಜೆಪಿ. ಈಗಾಗಲೆ ಅನೇಕ ರಾಜ್ಯಗಳಲ್ಲಿ ಮತದಾರರ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನೆಪದಲ್ಲಿ ಅಧಿಕಾರ ಹಿಡಿದಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಪ್ರತಿಯೊಬ್ಬರಿಗೂ ನೀಡಿರುವ ಮತದಾನದ ಹಕ್ಕನ್ನು ಸಂರಕ್ಷಿಸಿಕೊಳ್ಳಬೇಕಿದೆ ಎಂದರು.
ಸುರೇಶ್‍ನಾಯ್ಕ, ರಾಘವೇಂದ್ರ, ಶಿವಕುಮಾರ್, ಪುರುಷೋತ್ತಮ ತೋರಣಗಲ್, ಸಾಲೊಮನ್ ರಾಜ್‍ಕುಮಾರ್, ಅಶೋಕ, ಪವಿತ್ರ, ಬೈಲಮ್ಮ, ಪ್ರಭಾವತಿ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.










