ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ (Chanakya Niti) ಮಾನವ ಸಂಬಂಧಗಳು, ಯಶಸ್ಸು ಹಾಗೂ ಜೀವನ ನಿರ್ವಹಣೆಗೆ ಸಂಬಂಧಿಸಿದಂತೆ ಹತ್ತು ಹಲವು ಅಮೂಲ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಯಾರಿಗೆ ಸಲಹೆ ನೀಡಬೇಕು, ಯಾರಿಗೆ ನೀಡಬಾರದು ಎಂಬುದರ ಕುರಿತಾಗಿಯೂ ಚಾಣಕ್ಯರು ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದಾರೆ. ಅವರ ಪ್ರಕಾರ, ಕೆಲವೊಂದು ನಿರ್ದಿಷ್ಟ ಸ್ವಭಾವದ ವ್ಯಕ್ತಿಗಳಿಗೆ ನಾವು ಎಷ್ಟೇ ಒಳ್ಳೆಯ ಸಲಹೆ ನೀಡಿದರೂ ಅದು ನಮಗೆ ಹಾನಿ ಅಥವಾ ನಷ್ಟವನ್ನೇ ತಂದಿಡುತ್ತದೆ.
ಚಾಣಕ್ಯರ ನೀತಿಯ ಪ್ರಕಾರ ಯಾವ ರೀತಿಯ ಜನರಿಗೆ ಸಲಹೆ ನೀಡಬಾರದು ಎಂಬ ವಿವರ ಇಲ್ಲಿದೆ
ಮೂರ್ಖರಿಗೆ ಉಪದೇಶ ಸಲ್ಲದು:
ಎಷ್ಟೇ ಒಳ್ಳೆಯ ಸಲಹೆ ನೀಡಿದರೂ ಅದನ್ನು ಅರ್ಥಮಾಡಿಕೊಳ್ಳುವ ಜ್ಞಾನವಿಲ್ಲದ ವ್ಯಕ್ತಿಗಳಿಗೆ ಪದೇಪದೇ ಬೋಧನೆ ಮಾಡುವುದರಿಂದ ನಿಮ್ಮ ಸಮಯ ಮತ್ತು ಶ್ರಮ ಎರಡೂ ವ್ಯರ್ಥವಾಗುತ್ತವೆ. ಅಂತಹವರ ಮುಂದೆ ಒಳ್ಳೆಯ ಮಾತುಗಳನ್ನು ಆಡುವುದು ವ್ಯರ್ಥ ಪ್ರಯತ್ನ.
ತಮ್ಮದೇ ಸರಿ ಎಂಬ ಹಠಮಾರಿತನ ಉಳ್ಳವರು:
ಯಾರಾದರೂ ತಮ್ಮ ಅಭಿಪ್ರಾಯವೇ ಸರಿ ಎಂದು ಬಿಗಿಪಟ್ಟು ಹಿಡಿದಿದ್ದರೆ, ಅವರಿಗೆ ಎಷ್ಟೇ ತಿಳಿಹೇಳಿದರೂ ಅವರ ಯೋಚನೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಅಂಥವರ ತಪ್ಪುಗಳನ್ನು ತಿದ್ದಲು ಹೋಗಿ ನೀವೇ ಅಪರಾಧಿಯಾಗುವ ಸಾಧ್ಯತೆ ಇರುತ್ತದೆ.
ಕೇಳಿಸಿಕೊಳ್ಳುವ ಮನಸ್ಥಿತಿ ಇಲ್ಲದವರು:
ಸಲಹೆಗಳನ್ನು ಸ್ವೀಕರಿಸುವ ಮನಸ್ಥಿತಿಯೇ ಇಲ್ಲದ ವ್ಯಕ್ತಿಗೆ ಎಷ್ಟೇ ಹಿತವಚನ ನುಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಯಾರಿಗೆ ಕಲಿಯುವ ಅಥವಾ ಕೇಳುವ ಆಸಕ್ತಿ ಇಲ್ಲವೋ ಅಂಥವರಿಗೆ ಬೋಧನೆ ಮಾಡಬಾರದು.
ಎಲ್ಲರ ಹೊಣೆಗಾರಿಕೆಯನ್ನು ನೀವೇ ಹೊರಬೇಡಿ:
ಇತರರ ಜೀವನವನ್ನು ತಿದ್ದಿ ಬದಲಾಯಿಸುವ ಜವಾಬ್ದಾರಿ ಸಂಪೂರ್ಣವಾಗಿ ನಿಮ್ಮದಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಪ್ರತಿಯೊಬ್ಬರ ಸಮಸ್ಯೆಗಳನ್ನು ನಿಮ್ಮ ಹೆಗಲ ಮೇಲೆ ಹೊತ್ತುಕೊಳ್ಳಲು ಹೋಗಿ ನೆಮ್ಮದಿ ಹಾಳುಮಾಡಿಕೊಳ್ಳಬಾರದು.
ತಪ್ಪನ್ನು ಒಪ್ಪಿಕೊಳ್ಳದ ವ್ಯಕ್ತಿಗಳು:
ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದವರಿಗೆ ಎಷ್ಟೇ ವಿವರಣೆ ನೀಡಿದರೂ, ಅವರು ಅದೇ ತಪ್ಪನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಾರೆ. ಅಂಥವರಿಗೆ ಮಾರ್ಗದರ್ಶನ ನೀಡುವುದು ನಷ್ಟಕ್ಕೆ ಕಾರಣವಾಗುತ್ತದೆ.
ಸಲಹೆಗೆ ಬೆಲೆ ಕೊಡದವರು:
ನಿಮ್ಮ ಮಾತುಗಳಿಗೆ ಬೆಲೆ ನೀಡದೆ, ತಮಗೆ ಸ್ವಾರ್ಥಕ್ಕೆ ಅಗತ್ಯವಿದ್ದಾಗ ಮಾತ್ರ ಸಲಹೆ ಕೇಳುವ ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡುವುದರಿಂದ ಯಾವುದೇ ಮೌಲ್ಯ ಉಳಿಯುವುದಿಲ್ಲ.
ಸ್ವಂತ ಅನುಭವದಿಂದ ಪಾಠ ಕಲಿಯದವರು:
ತಮ್ಮ ತಪ್ಪುಗಳು ಅಥವಾ ಅನುಭವಗಳಿಂದ ಪಾಠ ಕಲಿಯದ ವ್ಯಕ್ತಿಯನ್ನು ಕೇವಲ ಮಾತುಗಳಿಂದ ಬದಲಾಯಿಸುವುದು ಅಸಾಧ್ಯ ಎಂದು ಚಾಣಕ್ಯರು ಸ್ಪಷ್ಟಪಡಿಸಿದ್ದಾರೆ.














