ಅಪ್ಪು ಅವರ ಕಳೆದ ಬಾರಿಯ ಹುಟ್ಟುಹಬ್ಬದಲ್ಲಿ ವಿಡಿಯೋ ಒಂದು ಎಲ್ಲರ ಮನಸ್ಸನ್ನು ಕದಲಿಸಿತ್ತು. ಅಪ್ಪು ನೀನು ನಂಗಿನ್ನು ಮಗುನೆ. ಈ ಅತ್ತೆನ ಒಮ್ಮೆ ಬಂದು ನೋಡ್ಕೊಂಡು ಹೋಗಪ್ಪ ಅಂತ ನಾಗಮ್ಮ ಅವರು ಹೇಳಿದ ವಿಡಿಯೋ ಅದಾಗಿತ್ತು. ಅಣ್ಣಾವ್ರ ತಲೆಮಾರಿನ ಕೊನೆಯ ಸದಸ್ಯೆ ಇವರು. ಈಗ 92 ವರ್ಷ ವಯಸ್ಸು ನಾಗಮ್ಮ ಅವರಿಗೆ. ಅಪ್ಪು ನಿಧನರಾದ ವಿಚಾರ ಕೊನೆಯವರೆಗೂ ಆ ಹಿರಿ ಜೀವದ ಕಿವಿಗೆ ಬಿದ್ದಿರಲಿಲ್ಲ. ಈಗ ಅವರು ಇಹಲೋಕ ತ್ಯಜಿಸಿದ್ದಾರೆ.
ಗಾಜನೂರಿನ ಮನೆಯಲ್ಲಿಯೇ ವಾಸವಿದ್ದ ನಾಗಮ್ಮ ಅವರು, ಮನೆಯಲ್ಲಿಯೇ ನಿಧನರಾಗಿದ್ದಾರೆ. ತುಂಬಾ ವಯಸ್ಸಾಗಿದ್ದ ಕಾರಣ ನಾಗಮ್ಮ ಅವರಿಗೆ ಅಪ್ಪು ನಿಧನದ ಸುದ್ದಿ ತಿಳಿದಿರಲಿಲ್ಲ. ಹೀಗಾಗಿ ಅಪ್ಪು ನೆಚ್ಚಿನ ನಾಗಮ್ಮತ್ತೆ ಅವರು, ಪ್ರತಿ ಹುಟ್ಟುಹಬ್ಬಕ್ಕೂ ಶುಭ ಕೋರುತ್ತಿದ್ದರು. ಕಂದ ಒಮ್ಮೆ ಬಂದು ಈ ಅತ್ತೆನಾ ನೋಡ್ಕೊಂಡು ಹೋಗಬಾರದಾ. ಎಷ್ಟು ದಿನಗಳಾಯ್ತು ಬಂದು ಅಂತ ಹೇಳ್ತಾ ಇದ್ದರು.
ರಾಜ್ ಕುಮಾರ್ ತಲೆಮಾರಿನ ಕೊನೆ ಸದಸ್ಯೆ ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅಣ್ಣಾವ್ರ ಕುಟುಂಬಸ್ಥರು ಅತ್ತೆಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಗಾಜನೂರಿಗೆ ಹೋದಾಗೆಲ್ಲಾ ಅತ್ತೆಯ ಜೊತೆಗೆ ಒಂದಷ್ಟು ಮಾತುಕತೆ ಮಾಡಿಯೇ ಮಕ್ಕಳು ಬರುತ್ತಿದ್ದರು. ತಂದೆ ಹುಟ್ಟಿಬೆಳೆದ ಮನೆಯ ನೆನಪು, ಅತ್ತೆಯ ಪ್ರೀತಿ ಎಲ್ಲವೂ ಇದ್ದ ಗಾಜನೂರಿಗೆ ಅಪ್ಪು ಅವರು ಬದುಕಿದ್ದಾಗ ಹೆಚ್ಚಾಗಿ ಹೋಗಿ ಬರ್ತಾ ಇದ್ದರು. ಶಿವಣ್ಣ, ಯುವ ರಾಜ್‍ಕುಮಾರ್, ವಿನಯ್ ರಾಜ್‍ಕುಮಾರ್ ಸೇರಿದಂತೆ ಮೊಮ್ಮಕ್ಕಳೆಲ್ಲಾ ಗಾಜನೂರಿಗೆ ಆಗಾಗ ಭೇಟಿ ಕೊಟ್ಟು, ನೆನಪುಗಳು ಬುತ್ತಿಯೊಂದಿಗೆ ಬರುತ್ತಿದ್ದರು. ಇಂದು ಆ ಕುಟುಂಬದ ಹಿರಿಯ ಜೀವ ಕೊನೆಯುಸಿರೆಳೆದಿದೆ.


