ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು ಹತ್ತು ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅಕ್ಕಿ ಸಿಗದ ಹಿನ್ನೆಲೆ ಐದು ಕೆಜಿ ಅಕ್ಕಿಯ ಜೊತೆಗೆ ಇನ್ನೈದು ಕೆಜಿ ಅಕ್ಕಿಯ ಹಣವನ್ನು ನೀಡುವುದಾಗಿ ತಿಳಿಸಿತ್ತು. ಇದೀಗ ಸೋಮವಾರ ಹಣ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಈ ಬಗ್ಗೆ ಮಾಹಿತಿ ನೀಡಿದ್ದು, ಜುಲೈ 10 ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ. 15 ದಿನದಲ್ಲಿ ಫಲಾನುಭವಿಗಳ ಖಾತೆಗೆ ಸಂಪೂರ್ಣ ಹಣವನ್ನು ಹಾಕುತ್ತೇವೆ. ಅನ್ನಭಾಗ್ಯ ಯೋಜನೆಯ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಲಾಗುತ್ತದೆ ಎಂದಿದ್ದಾರೆ.
ಪ್ರತಿ ಕೆ.ಜಿ. ಅಕ್ಕಿಗೆ 34 ರೂಪಾಯಿಗಳಂತೆ 170 ರೂಪಾಯಿ ನೀಡಲು ನಿರ್ಧರಿಸಲಾಗಿದೆ. ರಾಜ್ಯದ ಅಕ್ಕಿ ಪಡೆಯಲು ಯತ್ನಿಸಿದರೂ ಕೇಂದ್ರ ನೀಡಲಿಲ್ಲ. ಕರ್ನಾಟಕವೂ ಆಂಧ್ರಪ್ರದೇಶ, ತೆಲಂಗಾಣ ಮತ್ತಿತರ ರಾಜ್ಯಗಳನ್ನು ಸಂಪರ್ಕಿಸಿದರೂ ದರ ಹೆಚ್ಚಿತ್ತು. ಅದರಂತೆ ಅಕ್ಕಿ ಲಭ್ಯವಾಗುವವರೆಗೆ ಅಕ್ಕಿಯ ಬದಲಿಗೆ ಹಣ ಪಾವತಿಸಲು ರಾಜ್ಯ ನಿರ್ಧರಿಸಿದೆ ಎಂದರು.