ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಗೆ ಒತ್ತು : ಜಿ.ಪಂ.ಸಿಇಒ ಎಂ.ಎಸ್.ದಿವಾಕರ

2 Min Read

 

ಮಾಹಿತಿ ಮತ್ತು ಫೋಟೋ ಕೃಪೆ 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, ಡಿ.24: ಜಲ ಆಯ-ವ್ಯಯ ಆಧರಿಸಿ ದಿಬ್ಬದಿಂದ ಕಣಿವೆಯವರೆಗೆ (Ridge to Valley concept) ನೈಸರ್ಗಿಕ ಸಂಪನ್ಮೂಲಗಳ ವಿವಿಧ ಉಪಚಾರ  ಕ್ರಮಗಳನ್ನು ತಾಂತ್ರಿಕವಾಗಿ ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಗ್ರಾಮದ ಅಮೃತ ಸರೋವರ ಕೆರೆ ದಂಡೆಯ ಮೇಲೆ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಹುಲ್ಲೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮುಂದಿನ ಆರ್ಥಿಕ ವರ್ಷದಿಂದ ರಾಜ್ಯಾದ್ಯಂತ ಜಲ ಸಂಜೀವಿನಿ ಹೆಸರಿನಲ್ಲಿ GIS ವೈಜ್ಞಾನಿಕ ಆಧಾರಿತ ಕ್ರಿಯಾ ಯೋಜನೆ ಸಿದ್ದಪಡಿಸುತ್ತಿದ್ದು, ಗೋಮಾಳ ಅಭಿವೃದ್ಧಿ, ವಿಪತ್ತು ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಹಾಗೂ ಸುಸ್ಥಿರ ಜೀವನೋಪಾಯವನ್ನು ರೈತರಿಗೆ ತಿಳಿಯಪಡಿಸಲು ಮತ್ತು ಅಮೃತ ಸರೋವರ ಅನುಷ್ಠಾನ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯತಿಯು ಈಗಾಗಲೆ ಅನುಷ್ಟಾನಗೊಂಡ “ಜಲ ಸಂಜೀವಿನಿ- ರೈತ ಸಂವಾದ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ‌ ನರೇಗಾ ಯೋಜನೆಯಡಿ ದೂರ ಸಂವೇಧಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯ (RS-GIS) ತಾಂತ್ರಿಕತೆಯನ್ನು ಆಧಾರಿಸಿ ವೈಜ್ಞಾನಿಕವಾಗಿ ಕ್ರಿಯಾಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು.

ದೇಶದ ಬೆನ್ನೆಲುಬು ರೈತರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದ್ದು, ರೈತರಿಲ್ಲದ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೇಶದಲ್ಲಿ ಪ್ರತಿವರ್ಷವೂ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ. ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ. ಎಸ್ ರಂಗಸ್ವಾಮಿ ಮಾತನಾಡಿ, ಆರ್ಥಿಕ ಬೆಳವಣಿಗೆ ಮತ್ತು ಮಾನವಕುಲದ ಒಟ್ಟಾರೆ ಯೋಗಕ್ಷೇಮಕ್ಕೆ
ಗೋಮಾಳದ ಭೂಮಯನ್ನು ರಕ್ಷಿಸುವುದು ಮತ್ತು ಸಂರಕ್ಷಿಸುವ ಅಗತ್ಯತೆ, ಹಸಿರು, ಜಲ, ಮಣ್ಣು ಸಂರಕ್ಷಣೆ ಸುಸ್ಥಿರ ಜೀವನೋಪಾಯಕ್ಕೆ ಪೂರಕ ಕಾಮಗಾರಿಗಳ ವಿಷಯ ತಿಳಿಸುವುದರ ಜೊತೆ GIS ವೈಜ್ಞಾನಿಕ ಆಧಾರದದಲ್ಲಿ ಕಾಮಗಾರಿ ಕ್ರಿಯಾ ಯೋಜನೆ ಸಿದ್ದಪಡಿಸಿ ಅನುಷ್ಟಾನಿಸುವಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಅವರು ಜಲ ಸಂಜೀವಿನಿ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ರೈತ ದಿವಸದ ಅಂಗವಾಗಿ ರೈತರ ಪರಿಶ್ರಮ ಮತ್ತು ದುಡಿಮೆಗೆ ವಂದನೆಗಳನ್ನು ಸಲ್ಲಿಸುವ ನಿಟ್ಟಿನಲ್ಲಿ ಆಯ್ದ ರೈತರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ನಂತರ ರೈತರುಗಳ ಜೊತೆ ಸಂವಾದ ನಡೆಸಿದರು.
ಅಮೃತ ಸರೋವರ ದಂಡೆಯ ಮೇಲೆ ರೈತರೊ‌ಂದಿಗೆ ಉಪಹಾರಕೂಟ ಏರ್ಪಡಿಸಿ ಊಟವನ್ನು ಸವಿದು ಅರ್ಥಪೂರ್ಣವಾಗಿ ಕಾರ್ಯಕ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ  ಚಿತ್ರದುರ್ಗ ತಾಲ್ಲೂಕು ಇಒ ಹನುಮಂತಪ್ಪ, ಹುಲ್ಲೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅನುಷ್ಠಾನ ಇಲಾಖೆ ಅಧಿಕಾರಿಗಳು, ಪ್ರಗತಿಪರ ರೈತ ಮುಖಂಡರು  ಇದ್ದರು.

Share This Article
Leave a Comment

Leave a Reply

Your email address will not be published. Required fields are marked *