ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ. 28 : ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪ್ರಸಕ್ತ ಬಜೆಟ್‍ನಲ್ಲಿ ಗೌರವ ಧನ ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರಿಯಾಂಕಗಾಂಧಿ ಘೋಷಿಸಿದ ಆರನೆ ಗ್ಯಾರೆಂಟಿಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಹದಿನೈದು ಸಾವಿರ ರೂ. ಸಹಾಯಕಿಯರಿಗೆ ಹತ್ತು ಸಾವಿರ ರೂ.ಗಳ ಗೌರವ ಧನ ನೀಡಬೇಕು. ರಾಜ್ಯದಲ್ಲಿ ಒಂದು ಲಕ್ಷದ ನಲವತ್ತು ಸಾವಿರ ಅಂಗನವಾಡಿ ನೌಕರರು ಜೀವನ ಭದ್ರೆತೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಅಂಗನವಾಡಿಯಲ್ಲಿ ಮಕ್ಕಳ ಲಾಲನೆ, ಪಾಲನೆ, ಶಾಲಾ ಪೂರ್ವ ಶಿಕ್ಷಣ ನೀಡುವುದು. ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕಾಂಶ ಆಹಾರ ಪೂರೈಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಬೇಡಿಕೆಗಳನ್ನು ಸರ್ಕಾರ ತಿರಸ್ಕರಿಸುತ್ತ ಬರುತ್ತಿರುವುದು ನೋವಿನ ಸಂಗತಿ. ಗುಜರಾತ್ ಉಚ್ಚ ನ್ಯಾಯಾಲಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗಧಿಗೊಳಿಸುವಂತೆ ಆದೇಶಿಸಿ ತೀರ್ಪು ನೀಡಿದೆ. ರಾಜ್ಯ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಗೌರವ ಧನ ಹೆಚ್ಚಳವಾಗಬೇಕೆಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಒತ್ತಾಯಿಸಿದರು.
ಕಾಂ.ಎಸ್.ಭಾಗ್ಯಮ್ಮ, ಕಾಂ.ಜಮುನಾಬಾಯಿ, ಕಾಂ.ಪಿ.ಕೆ.ವಿನೋದಮ್ಮ, ಕಾಂ.ಎಂ.ಸಾವಿತ್ರಮ್ಮ, ಕಾಂ.ರಾಧಮ್ಮ, ಕಾಂ.ಈ.ಸತ್ಯಕೀರ್ತಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



















