ಬೆಂಗಳೂರು: ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ಸಂಪೂರ್ಣ ಕಾನೂನುಬಾಹಿರವಾಗಿದೆ ಎಂದು ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದು, ಶಿವಕುಮಾರ್ ಅವರು ಸತ್ಯ ಹರಿಶ್ಚಂದ್ರ ಎಂದು ಸಾಬೀತು ಪಡಿಸಲು ಇನ್ನು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಜಯೇಂದ್ರ ಅವರು, ಜನತೆಯ ಮುಂದೆ ನೀವೂ ತಪ್ಪು ಮಾಡಿಲ್ಲ ಎಂದು ತನಿಖೆ ಎದುರಿಸಿ ಸಾಬೀತುಪಡಿಸಿ ತೋರಿಸಿ. ಆದಾಯ ತೆರಿಗೆ ದಾಳಿಯಾದಾಗ ಬೆಂಗಳೂರು ಮತ್ತು ವಿವಿದೆಡೆ ಲಭಿಸಿದ ಹಣದ ವಿಷಯ ಎಲ್ಲರಿಗೂ ಗೊತ್ತು. ಇಡಿ ಕೂಡ ಹಲವು ವರ್ಷಗಳ ತನಿಖೆ ನಡೆಸಿದೆ. ಕ್ಯಾಬಿನೆಟ್ ನಿರ್ಧಾರ ಸಂಪೂರ್ಣವಾಗಿ ತಪ್ಪು ನಿರ್ಧಾರವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ನಿರ್ಧಾರ ದುರದೃಷ್ಟಕರ ಹಾಗೂ ಬಿಜೆಪಿ ಈ ನಿರ್ಧಾರವನ್ನು ಖಂಡಿಸುತ್ತದೆ. ಇದು ಕಾನೂನಿನ ವಿರುದ್ಧ ತೆಗೆದುಕೊಂಡಿರುವ ನಿರ್ಧಾರವಾಗಿದೆ. ಡಿಕೆ ಶಿವಕುಮಾರ್ ಯಾಕಾಗಿ ತನಿಖೆಗೆ ಭಯ ಪಡುತ್ತಾರೆ..? ಅವರಿಗೆ ಕಾನೂನಿನ ಮೇಲೆ ವಿಶ್ವಾಸ ಇಲ್ಲವೆ..? ತಾವು ಹಲವು ವರ್ಷಗಳಿಂದ ನಿರಂತರವಾಗಿ ಕಾನೂನು ಹೋರಾಟ ಮಾಡುತ್ತ ಬರುತ್ತಿದ್ದೀರಿ. ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜವಾಬ್ದಾರಿಯ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಪ್ರಾಮಾಣಿಕವಾಗಿ ಇದ್ದರೆ ಕ್ಯಾಬಿನೆಟ್ ಕೈಗೊಳ್ಳುವ ಈ ತೀರ್ಮಾವನ್ನು ವಿರೋಧಿಸಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.