ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 27 : ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ 135 ನೇ ಜಯಂತಿ ಆಚರಿಸಲಾಯಿತು.
ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾರವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತ ಸಂವಿಧಾನವನ್ನು ಮೊದಲು ಎಲ್ಲರೂ ತಿಳಿದುಕೊಂಡಾಗ ಕಾನೂನಿನ ಅರಿವು ಮೂಡುತ್ತದೆ. ರಾಜ ಮಹಾರಾಜರು, ಪುರಾತನ ಕಾಲದಿಂದಲೂ ಕಾನೂನಿದೆ. ಸಮಾನತೆ, ಹಕ್ಕು ಮತ್ತು ಕರ್ತವ್ಯವನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಕೊಳಗೇರಿ ನಿವಾಸಿಗಳು ಬಡತನವನ್ನು ಮುಂದಿಟ್ಟುಕೊಂಡು ಮಕ್ಕಳನ್ನು ಶಿಕ್ಷಣದಿಂದ ವಂಚಿಸಬಾರದು. ಸಂವಿಧಾನದಡಿ ಸಿಗುವ ಹಕ್ಕುಗಳನ್ನು ಬಳಸಿಕೊಳ್ಳಬೇಕಾದರೆ ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ತಿಳಿಸಿದರು.
ಬಾಲ್ಯದಲ್ಲಿಯೇ ಸಾಕಷ್ಟು ಹಿಂಸೆ, ನೋವು, ಅವಮಾನ, ಅಸ್ಪøಶ್ಯತೆಯನ್ನು ಅನುಭವಿಸಿದ ಡಾ.ಬಿ.ಆರ್.ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಬೌದ್ದ ಧರ್ಮಕ್ಕೆ ಸೇರ್ಪಡೆಯಾದರು. ಅತ್ಯಂತ ಬಲಿಷ್ಟವಾದ ಸಂವಿಧಾನವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ನರಕವೆಂದು ಹೇಳಿ ಅಮಾನಿಸಿರುವುದನ್ನು ಯಾರು ಖಂಡಿಸುತ್ತಿಲ್ಲದಿರುವುದು ನೋವಿನ ಸಂಗತಿ. ಸಾವಿರಾರು ಜಾತಿ ಧರ್ಮಗಳಿರುವ ಭಾರತದಲ್ಲಿ ಎಲ್ಲರೂ ಸಹೋದರತ್ವದಿಂದ ಬದುಕುತ್ತಿದ್ದಾರೆ. ನಮ್ಮ ದೇಶದ ಬಗ್ಗೆ ಹಗುರುವಾಗಿ ಮಾತನಾಡುವ ಟ್ರಂಪ್‍ಗೆ ಪ್ರಧಾನಿ ಮೋದಿರವರು ತಕ್ಕ ಉತ್ತರ ಕೊಡಬೇಕೆಂದು ಮನವಿ ಮಾಡಿದರು.
ಕೆಕೆಎನ್‍ಎಸ್‍ಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್‍ರವರು ಸಂವಿಧಾನದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಪ್ರತಿಯೊಬ್ಬ ಪ್ರಜೆಗೂ ಸಮಾನತೆಯನ್ನು ನೀಡಿದ್ದಾರೆ. ಸಂವಿಧಾನದಡಿಯಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಕೊಳಗೇರಿ ನಿವಾಸಿಗಳು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಿದಾಗ ಮಾತ್ರ ಸಂವಿಧಾನದ ಆಶಯಗಳು ಈಡೇರುತ್ತವೆಂದರು.
ಎನ್.ರಂಗಸ್ವಾಮಿ, ಶಬಿನಾಜಾನ್, ಲೀಲಾವತಿ, ಚಂದ್ರಮ್ಮ, ರಜಿಯಾಬಿ, ಸರೋಜಮ್ಮ, ಗಂಗಮ್ಮ ಇನ್ನು ಮುಂತಾದವರು ಅಂಬೇಡ್ಕರ್ ಜಯಂತಿಯಲ್ಲಿದ್ದರು.





















