ಅಯೋಧ್ಯೆಯ ರಾಮಮಂದಿರದ ಪ್ರಸಾದ ಎಂಬ ಹೆಸರಿನಲ್ಲಿ ಸಾಮಾನ್ಯ ಸಿಹಿತಿಂಡಿಗಳನ್ನು ಮಾರಾಟ ಮಾಡಿ ಗ್ರಾಹಕರನ್ನು ದಾರಿತಪ್ಪಿಸಿದ ಆರೋಪದ ಹಿನ್ನೆಲೆಯಲ್ಲಿ ಇ-ಕಾಮರ್ಸ್ ದೈತ್ಯ ಅಮೆಜಾನ್‌ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ₹1 ಲಕ್ಷ ದಂಡ ವಿಧಿಸಿದೆ.ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಭಕ್ತರ ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ವ್ಯಾಪಾರ ನಡೆಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೂ ಮುನ್ನ ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ತುಪ್ಪದ ಲಾಡು, ಖೋವಾ ಪೇಡಾ ಹಾಗೂ ಮಿಲ್ಕ್ ಪೇಡಾ ಸೇರಿದಂತೆ ಸಾಮಾನ್ಯ ಸಿಹಿತಿಂಡಿಗಳನ್ನು ‘ಶ್ರೀ ರಾಮ ಮಂದಿರ ಅಯೋಧ್ಯೆ ಪ್ರಸಾದ್’ ಎಂಬ ಹೆಸರಿನಲ್ಲಿ ಮಾರಾಟಕ್ಕೆ ಇಡಲಾಗಿತ್ತು.ಈ ಸಿಹಿತಿಂಡಿಗಳು ಅಯೋಧ್ಯೆಯ ರಾಮಮಂದಿರದ ಅಧಿಕೃತ ಪ್ರಸಾದ ಎಂಬ ಭಾವನೆ ಗ್ರಾಹಕರಲ್ಲಿ ಮೂಡುವಂತೆ ಉತ್ಪನ್ನಗಳನ್ನು ಬಿಂಬಿಸಲಾಗಿತ್ತು ಎಂದು CCPA ತಿಳಿಸಿದೆ.
ಈ ಕುರಿತು ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) 2024ರ ಜನವರಿಯಲ್ಲಿ ಗ್ರಾಹಕ ಪ್ರಾಧಿಕಾರಕ್ಕೆ ದೂರು ನೀಡಿತ್ತು. ಬಳಿಕ CCPA ಅಮೆಜಾನ್‌ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ಬಳಿಕ ವಿವಾದಿತ ಉತ್ಪನ್ನಗಳ ಲಿಂಕ್‌ಗಳನ್ನು ಅಮೆಜಾನ್ ತೆಗೆದುಹಾಕಿತ್ತು.
ರಾಮಮಂದಿರ ಪ್ರಸಾದ ಮಾರಾಟಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಯಾವುದೇ ಅನುಮತಿ ಪಡೆಯಲಾಗಿರಲಿಲ್ಲ ಎಂದು CCPA ಗಮನಿಸಿದೆ. ಹೀಗಾಗಿ ಭಕ್ತರು ಈ ಸಿಹಿತಿಂಡಿಗಳನ್ನು ಅಯೋಧ್ಯೆಯ ರಾಮಮಂದಿರದ ಅಧಿಕೃತ ಪ್ರಸಾದ ಎಂದು ತಪ್ಪಾಗಿ ಪರಿಗಣಿಸುವ ಸಾಧ್ಯತೆಯಿದೆ ಎಂದು ಪ್ರಾಧಿಕಾರ ಹೇಳಿದೆ.
ಈ ಹಿನ್ನೆಲೆಯಲ್ಲಿ CCPA ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತ ಅನುಪಮ್ ಮಿಶ್ರಾ ನೇತೃತ್ವದ ಸಮಿತಿಯು ಅಮೆಜಾನ್‌ಗೆ ₹1 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಅಮೆಜಾನ್ ಸ್ಪಷ್ಟನೆ ಏನು?
ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್ ಮುಕ್ತ ಮಾರುಕಟ್ಟೆಯಾಗಿದ್ದು, ಸಂಬಂಧಪಟ್ಟ ಸಿಹಿತಿಂಡಿಗಳನ್ನು ಕಂಪನಿ ನೇರವಾಗಿ ಮಾರಾಟ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಮೂರನೇ ವ್ಯಕ್ತಿಯ ಮಾರಾಟಗಾರರು ಉತ್ಪನ್ನಗಳನ್ನು ಲಿಸ್ಟ್ ಮಾಡಿದ್ದರು ಎಂದು ತಿಳಿಸಿದೆ.
ಪ್ರಾಧಿಕಾರದ ನೋಟಿಸ್ ಬಳಿಕ ವಿವಾದಿತ ಉತ್ಪನ್ನಗಳ ಲಿಂಕ್‌ಗಳನ್ನು ತೆಗೆದುಹಾಕಲಾಗಿದೆ. ನಿಯಮ ಉಲ್ಲಂಘಿಸಿದ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಇಂತಹ ಸೂಕ್ಷ್ಮ ಉತ್ಪನ್ನಗಳ ಲಿಸ್ಟಿಂಗ್‌ಗೂ ಮುನ್ನ ಹೆಚ್ಚಿನ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಮೆಜಾನ್ ತಿಳಿಸಿದೆ.CCPA ವಿಧಿಸಿರುವ ದಂಡವನ್ನು ಪಾವತಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಮೆಜಾನ್ ಭರವಸೆ ನೀಡಿದೆ.










