ಕಾಂಗ್ರೆಸ್‌ನಲ್ಲಿ ಇರಲಾರೆ, ಬಿಜೆಪಿ ಸೇರಲಾರೆ ; ಅಮರೀಂದರ್ ಸಿಂಗ್ ಸ್ಪಷ್ಟನೆ

suddionenews
2 Min Read

ಸುದ್ದಿಒನ್, ಚಂಡೀಗಢ : ಪಂಜಾಬ್‌ನ ಕಾಂಗ್ರೆಸ್ ಪಕ್ಷದಲ್ಲಿ  ಮಹತ್ವದ ಬದಲಾವಣೆಗಳು ನಡೆಯುತ್ತಿವೆ. ಅಮರೀಂದರ್ ಸಿಂಗ್ ರಾಜೀನಾಮೆ, ಚನ್ನಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ, ಸಿದ್ದು ರಾಜೀನಾಮೆ ಹೀಗೆ ಒಂದರ ನಂತರ ಒಂದು ಪಂಜಾಬ್ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ.

ಈ ಹಿನ್ನೆಲೆಯಲ್ಲಿ ಅಮರೀಂದರ್ ಸಿಂಗ್ ಬುಧವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕ್ಯಾಪ್ಟನ್ ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳು ಪಂಜಾಬ್ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಈ ಎಲ್ಲಾ ಬೆಳವಣಿಗೆಗೆ ಅಮರೀಂದರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಸೇರುವ ಕುರಿತು ಮಾತನಾಡಿದ್ದಾರೆ. ಅವರು ಮಾತನಾಡುತ್ತಾ,  ಕಾಂಗ್ರೆಸ್ ಪಕ್ಷದಲ್ಲಿ ಇರುವುದಿಲ್ಲ ಮತ್ತು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. NDTV ಗೆ ನೀಡಿದ ಸಂದರ್ಶನದಲ್ಲಿ, ಅಮರೀಂದರ್ ಹಲವಾರು ವಿಷಯಗಳ ಕುರಿತು ಮಾತನಾಡಿದ್ದಾರೆ.

ನಾನು ಕಳೆದ 52 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನಗೆ ನನ್ನದೇ ಆದ ಕೆಲವು ಮೌಲ್ಯಗಳು ಮತ್ತು ನಿಯಮಗಳಿವೆ. ಕಾಂಗ್ರೆಸ್ ವರಿಷ್ಠರು ನನಗೆ 10.30 ಕ್ಕೆ ಕರೆ ಮಾಡಿ ರಾಜೀನಾಮೆ ನೀಡುವಂತೆ ಕೇಳಿದರು. ನಾನು ಮರುಮಾತನಾಡದೆ  ಸಂಜೆ 4 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದೆ. 50 ವರ್ಷಗಳ ನಂತರ ಪಕ್ಷಕ್ಕೆ ನನ್ನ ಬಗ್ಗೆ, ನನ್ನ ವಿಶ್ವಾಸಾರ್ಹತೆಯ ಬಗ್ಗೆ ಕೊರತೆ ಕಂಡು ಬಂದಿದೆ. ನಿಮಗೆ ನನ್ನ ಮೇಲೆ ನಂಬಿಕೆಯಿಲ್ಲದಿರುವಾಗ ನಾನು ಪಕ್ಷದಲ್ಲಿ ಏಕೆ ಮುಂದುವರೆಯಬೇಕು ಎಂದು ಪ್ರಶ್ನಿಸಿದರು.

ಈ ವಿಚಾರದಲ್ಲಿ ಪಕ್ಷ ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ. ನಾನು ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಆದರೆ ಇಂತಹ ಸಂದರ್ಭಗಳಲ್ಲಿ ನಾನು ಈ ಪಕ್ಷದಲ್ಲಿ ಮುಂದುವರಿಯುವುದು ಹೇಗೆ ? ನಾನು ಕೆಲವೇ ನಿಮಿಷಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಯಲ್ಲ. ನಾನು ಕಾಂಗ್ರೆಸ್ ನಲ್ಲಿ ಮುಂದುವರಿಯುವುದಿಲ್ಲ ಮತ್ತು ಬಿಜೆಪಿಗೆ ಸೇರುವುದಿಲ್ಲ  ಎಂದು ಅಮರೀಂದರ್ ಸ್ಪಷ್ಟಪಡಿಸಿದರು.

ಸಿಧು ಓರ್ವ ಅಪಕ್ವ ರಾಜಕಾರಣಿ. ಆದ್ದರಿಂದ ಆತ ಎಲ್ಲಿಯೂ ಸ್ಥಿರವಾಗಿರಲು ಸಾಧ್ಯವಿಲ್ಲ. ಇಂತಹ ವ್ಯಕ್ತಿ ಪಕ್ಷವನ್ನು ಮುನ್ನಡೆಸಲು ಸಾಧ್ಯವಿಲ್ಲ. ಪಂಜಾಬ್ ಕಾಂಗ್ರೆಸ್ ಅನ್ನು ಹೇಗೆ ಮುನ್ನಡೆಸಲು ಸಾಧ್ಯ.

ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಪಂಜಾಬ್ ನಲ್ಲಿ ಕಾಂಗ್ರೆಸ್ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಮತ್ತು ಆಪ್ ಮತ್ತು ವಿರೋಧ ಪಕ್ಷಗಳು ಬೆಳೆಯುತ್ತಿವೆ. ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಪ್ರಸ್ತುತ ಅಮರಿಂದರ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಅವರು ಯಾರನ್ನೂ ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *