ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಏ. 24 : ಅಕ್ಕ ಮಹಾದೇವಿ ಅಂದು ಪ್ರಸ್ತುತ ಪಡಿಸಿದ ವಚನಗಳು ಇಂದಿಗೂ ಸಹಾ ಸಮಾಜಕ್ಕೆ ಅಗತ್ಯವಾಗಿವೆ, ಅದರ ಸಾರವನ್ನು ತಿಳಿದುಕೊಂಡವರು ಬದುಕಿನಲ್ಲಿ ಯಶಸು ಕಾಣಲು ಸಾಧ್ಯವಿದೆ ಎಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ ಮಾತಾಜಿ ತಿಳಿಸಿದರು.
ನಗರದ ಶ್ರೀ ಗಾನಯೋಗಿ ಸಂಗೀತ ಬಳಗದವತಿಯಿಂದ ನಗರದ ಹೊಳಲ್ಕೆರೆ ರಸ್ತೆಯ ಶ್ರೀಮತಿ. ಶಾರದಮ್ಮ ಶ್ರೀ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಚಿತ್ರದುರ್ಗ ಶಿವಶರಣೆ ಅಕ್ಕಮಹಾದೇವಿ ಜಯಂತ್ಯೋತ್ಸವ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಮಾತಾಜಿಯವರು, ಶಿವ ಪಥವನ್ನು ಅರಿಯಲು ಗುರುವು ಮುಖ್ಯವಾಗಿದ್ದಾನೆ. ಶ್ರದ್ದಾ, ಭಕ್ತಿ, ನಿಷ್ಠೆ, ಆರಿವು, ಅನುಭವ ಸಂಗಮವನ್ನು ಹೊಂದಿದೆ. ಗುರುವಿನ ಮಹತ್ವವನ್ನು ಶರಣರು ವಚನದಲ್ಲಿ ತಿಳಿಸಿದ್ದಾರೆ.
ಮಾಯೆ ಅಜ್ಞಾನದಿಂದ ಗುರು ಎಲ್ಲರನ್ನು ಕಾಪಾಡಿದ್ದಾನೆ. ಜ್ಞಾನದಿಂದ ಶಿವ ಪಥವನ್ನು ಅರಿಯಲು ಸಾಧ್ಯವಿದೆ. ಎಲ್ಲರಿಗೂ ಗುರವಿನ ಕರುಣೆ ಅಗತ್ಯವಾಗಿದೆ. ಅಕ್ಕಮಹಾದೇವಿಯ ವಚನಗಳು ಇಂದಿನ ಕಾಲಕ್ಕೂ ಸಹಾ ಪ್ರಸ್ತುತವಾಗಿವೆ. ವಚನಗಳನ್ನು ಕಲಿಯುವುದರಿಂದ ಮನ ಪರಿವರ್ತನೆಯಾಗುತ್ತದೆ. ಅಕ್ಕನ ಜ್ಞಾನ, ಅರಿವು, ಆಚಾರ ಇಂದಿಗೂ ಅಗತ್ಯವಾಗಿವೆ. ಎಲ್ಲರ ಮನೆಗಳಲ್ಲಿ ಪ್ರತಿ ದಿನ ವಚನಗಳ ಗಾಯನ ಮಾಡುವಂತ ಕಾರ್ಯವಾಗಬೇಕು ಅಲ್ಲದೆ ಇದನ್ನು ಮಕ್ಕಳಿಗೆ ಇದರ ಮಹತ್ವವನ್ನು ತಿಳಿಸಿಕೊಡಬೇಕಿದೆ ಎಂದು ಕರೆ ನೀಡಿದರು.
ನಿವೃತ್ತ ಉಪನ್ಯಾಸಕರಾದ ಶ್ರೀಮತಿ. ನೀಲಮ್ಮ ಬಸಯ್ಯರವರು ಅಕ್ಕಮಹಾದೇವಿ ಜೀವನ ದರ್ಶನದ ಬಗ್ಗೆ ಉಪನ್ಯಾಸವನ್ನು ನೀಡುತ್ತಾ, ಅಕ್ಕಮಹಾದೇವಿ ಚನ್ನಮಲ್ಲಕಾರ್ಜನನ್ನು ತನ್ನ ಗಂಡನನ್ನಾಗಿ ಮಾಡಿಕೊಂಡು ಆತನನ್ನು ಹುಡುಕುತ್ತಾ ದೇಶದಲ್ಲಿ ಸಂಚಾರವನ್ನು ಮಾಡುತ್ತಾ ವಚನಗಳನ್ನು ರಚನೆ ಮಾಡುವುದರ ಮೂಲಕ ಸಮಾಜವನ್ನು ತಿದ್ದುವಂತ ಕೆಲಸವನ್ನು ಮಾಡಿದ್ದಾಳೆ. 12ನೇ ಶತಮಾನದಲ್ಲಿ ಕೇವಲ 30 ವರ್ಷ ಮಾತ್ರ ಬದುಕಿದ ಅಕ್ಕ ಮಹಾದೇವಿ ಜೀವನ ಪೂರ್ಣವಾಗಿ ಮಾಡುವಂತ ಸಮಾಜ ಸುಧಾರಣೆಯ ಕೆಲಸವನ್ನು ಮಾಡಿದ್ದಾಳೆ, ಮಹಿಳೆಯ ಬದುಕಿಗೆ ದಾರಿನ ದೀಪವಾಗಿದ್ದಾಳೆ, 12ನೇ ಶತಮಾನದಲ್ಲಿ ಇಂದಿನ ಪ್ರಜಾಪ್ರಭುತ್ವದಡಿಯಲ್ಲಿ ಅದೇ ಅನುಭವ ಮಂಟಪವನ್ನು ನಿರ್ಮಾಣ ಮಾಡಲಾಗಿತ್ತು. 900 ವರ್ಷಗಳ ಹಿಂದೆ ರಚನೆಯಾದ ವಚನಗಳು ಇಂದಿಗೂ ಸಹಾ ಪ್ರಸ್ತುತವಾಗಿವೆ ಎಂದರು.
ಬಾಪೂಜಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಕೆ.ಎಂ. ವೀರೇಶ್ ಮಾತನಾಡಿ, ಇಂದಿನ ದಿನಮಾನದಲ್ಲಿ ಜನತೆಯಲ್ಲಿ ಓದುವಂತ ಸಂಸ್ಕøತಿ ಕಡಿಮೆಯಾಗುತ್ತಿದೆ ಈ ಸಮಯದಲ್ಲಿ ತೊಟಪ್ಪರವರು ಸಂಸ್ಥೆಯನ್ನು ಪ್ರಾರಂಭಿಸಿ ಅಲ್ಲಿ ಮಹಿಳೆಯರಿಗೆ ವಚನಗಳನ್ನು ಹೇಳಿ ಕೂಡುವುದರ ಮೂಲಕ ಜನತೆಯಲ್ಲಿ ವಚನದ ಅರಿವನ್ನು ಮೂಡಿಸುತ್ತಿದ್ದಾರೆ. ವಚನಗಳ ಗಾಯನ ಮಾಡುವುದರ ಮೂಲಕ ಎಲ್ಲಾ ಶರಣರನ್ನು ನೆನಯಲಾಗುತ್ತದೆ. ಇದರಿಂದ ಸಂಸ್ಕಾರ, ಸಾಹಿತ್ಯವನ್ನು ಕಲಿತಂತೆ ಆಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಗಣನೀಯ ಸೇವೆಯನ್ನು ಮಾಡಿದ ಸಾಧಕರಾದ ಅಂಜನಾ ನೃತ್ಯ ಕಲಾ ಕೇಂದ್ರದ ವಿದ್ವಾನ್ ಶ್ರೀ ಸಿ.ಆರ್. ಶಿವಪ್ರಕಾಶ್, ಚಿನ್ಮೂಲಾದ್ರಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕರು ಹಾಗೂ ಸಾಹಿತಿಗಳಾದ ಶ್ರೀಮತಿ ದಯಾ ಪುತ್ತೂರ್ಕರ್, ಶ್ರೀ ಬಸವೇಶ್ವರ ಮೆಡಿಕಲ್ ಕಾಲೇಜ್ ಹಾಸ್ಪಿಟಲ್‍ನ ಸ್ತ್ರೀ ಮತ್ತು ಪ್ರಸೂತಿ ತಜ್ಞರಾದ ಶ್ರೀಮತಿ ಡಾ ಲತಾ ರಮೇಶ್, ಸಂಗೀತ ಶಿಕ್ಷಕರಾದ ಶ್ರೀಮತಿ ಕೋಕಿಲ ರುದ್ರಮೂರ್ತಿ ಹಾಗೂ ಗಾಯಕರಾದ ಶ್ರೀಮತಿ ಶಶಿಕಲಾ ಬಸವರಾಜ್‍ರವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಬಾಪೂಜಿ ಸಮೂಹ ಸಂಸ್ಥೆಗಳು ಕೆ.ಎಂ. ವೀರೇಶ್, ಯೋಗ ಗುರುಗಳಾದ ಚಿನ್ಮಯಾನಂದ, ಶಾರದಾ ಬ್ರಾಸ್ ಬ್ಯಾಂಡ್‍ನ ಎಸ್.ವಿ. ಗುರುಮೂರ್ತಿ, ಶಿಕ್ಷಕರಾದ ಶ್ರೀಮತಿ ಶೋಭ ಮಲ್ಲಿಕಾರ್ಜುನ್ ಹಾಗೂ ಸಮಾಜ ಸೇವಕರಾದ ಶ್ರೀಮತಿ ಅನ್ನಪೂರ್ಣ ಸಜ್ಜನ್‍ರವರಿಗೆ ಅಭಿನಂದಿಸ ಲಾಯಿತು.
ಅಧ್ಯಕ್ಷತೆಯನ್ನು ಶ್ರೀ ಗಾನಯೋಗಿ ಸಂಗೀತ ಬಳಗದ ಖಜಾಂಚಿ, ಎಸ್.ಜೆ.ಎಂ. ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‍ನ ಸಹ ಲೆಕ್ಕಪಾಲಕರಾದ ಶ್ರೀಮತಿ ಸುಮಾ ರಾಜಶೇಖರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುನಿತಾ ಮಲ್ಲಿಕಾರ್ಜುನ್, ಶ್ರೀ ಗಾನಯೋಗಿ ಸಂಗೀತ ಬಳಗದ ಗೌರವಾಧ್ಯಕ್ಷರಾದ ಬಸವರಾಜ ಕತ್ತಿ, ಅಧ್ಯಕ್ಷರಾದ ತೋಟಪ್ಪ ಉತ್ತಂಗಿ ಕಾರ್ಯದರ್ಶಿ ಎಸ್.ಸಿ. ವರದ ಶಂಕರ್, ಜ್ಞಾನಮೂರ್ತಿ, ನಾಗರಾಜ್ ಸಗಂ, ಶಂಕರಪ್ಪ ಭಾಗವಹಿಸಿದ್ದರು.
ಬೆಳಿಗ್ಗೆ 10 ರಿಂದ ಶ್ರೀ ಗಾನಯೋಗಿ ಸಂಗೀತ ಬಳಗದ ಸದಸ್ಯರಿಂದ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮ ನಡೆಯಿತು, ಇದ್ದಲ್ಲದೆ ಅಂಜನಾ ನೃತ್ಯ ಕಲಾ ಕೇಂದ್ರ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನವಾಯಿತು. ಶ್ರೀಮತಿ ರಶ್ಮಿ ವಸಂತ ಸ್ವಾಗತಿಸಿದರೆ, ಶ್ರೀಮತಿ ಗೀತಾ ರುದ್ರೇಶ್ ಪ್ರಸ್ತಾವಿಕ ನುಡಿಗಳನ್ನಾಡಿದರು, ಶ್ರೀಮತಿ ಮೀನಾಕ್ಷಿ ವಂದಿಸಿದರೆ ಶ್ರೀಮತಿ ಜಗದೀಶ್ವರಿ ಕಾರ್ಯಕ್ರಮ ನಿರೂಪಿಸಿದರು.


















