ಬೆಂಗಳೂರು.ಜುಲೈ.25: ಗ್ರಾಮೀಣ ಹಾಗೂ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಆಧುನಿಕ ತಾಂತ್ರಿಕ ಜ್ಞಾನ, ಉದ್ಯೋಗಾರ್ಹತೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ ಬೆಳೆಸಲು ಶಿಕ್ಷಣ ಇಲಾಖೆ ಭಾರಿ ಹೆಜ್ಜೆ ಇಟ್ಟಿದೆ. ಮುಂಬರುವ ಶೈಕ್ಷಣಿಕ ಸಾಲಿನಿಂದಲೇ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ (AI) ಪಠ್ಯಕ್ರಮ ಜಾರಿಗೆ ಬರಲಿದೆ.
ರಾಜ್ಯದ ‘ಸಮಗ್ರ ಶಿಕ್ಷಣ ಕರ್ನಾಟಕ’ ಇಲಾಖೆಯು ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟದ ತಾಂತ್ರಿಕ ಸವಾಲುಗಳಿಗೆ ಸಜ್ಜುಗೊಳಿಸಲು ಮುಂದಾಗಿದೆ. 2026-27ನೇ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ ಒಟ್ಟು 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ ಕೋರ್ಸ್ ಅನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ನೂತನವಾಗಿ ಅನುಮೋದನೆ ಪಡೆದಿರುವ 1,180 ಪ್ರೌಢಶಾಲೆಗಳು, 381 ಎನ್ಎಸ್ಕ್ಯೂಎಫ್ (NSQF) ಶಾಲೆಗಳು ಹಾಗೂ ಚಾಲ್ತಿಯಲ್ಲಿರುವ 81 ಸಿಂಗಲ್ ಸೆಕ್ಟರ್ ಶಾಲೆಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ, ಈ ಹಿಂದೆ ಬೋಧಿಸಲಾಗುತ್ತಿದ್ದ ಬ್ಯೂಟಿ ಆ್ಯಂಡ್ ವೆಲ್ನೆಸ್, ರಿಟೇಲ್ ಹಾಗೂ ಫ್ಯಾಷನ್ ಡಿಸೈನಿಂಗ್ನಂತಹ ಹಳೆಯ ಕೋರ್ಸ್ಗಳನ್ನು ಕೈಬಿಟ್ಟು, ಅವುಗಳ ಜಾಗದಲ್ಲಿ ತೃತೀಯ ಭಾಷೆಯ ಸ್ಥಾನದಲ್ಲಿ ಎಐ ವಿಷಯವನ್ನು ಹೊಸ ಪಠ್ಯಕ್ರಮವಾಗಿ ಕಡ್ಡಾಯಗೊಳಿಸಲು ಇಲಾಖೆ ತೀರ್ಮಾನಿಸಿದೆ.

ಈ ನೂತನ ತಾಂತ್ರಿಕ ಪಠ್ಯವನ್ನು ಪರಿಣಾಮಕಾರಿಯಾಗಿ ಬೋಧಿಸಲು ಪ್ರತಿ ಶಾಲೆಗೆ ಒಬ್ಬರಂತೆ ‘ಎಐ ಅತಿಥಿ ಶಿಕ್ಷಕರನ್ನು’ ನೇಮಿಸಿಕೊಳ್ಳಲು ಆದೇಶಿಸಲಾಗಿದೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷರ ನೇತೃತ್ವದ ಸಮಿತಿಯು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು, ಆಯ್ಕೆಯಾದ ಶಿಕ್ಷಕರಿಗೆ ಮಾಸಿಕ ₹20,000 ಗೌರವಧನ ಸಿಗಲಿದೆ.
ಕಂಪ್ಯೂಟರ್ ಸೈನ್ಸ್ ಅಥವಾ ಐಟಿಯಲ್ಲಿ ಡಿಪ್ಲೊಮಾ, ಬಿಸಿಎ (BCA), ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್, ಪಿಜಿಡಿಸಿಎ (PGDCA) ಅಥವಾ DOEACC ‘A’ ಲೆವೆಲ್ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಈ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ನೇಮಕಾತಿ ಪ್ರಕ್ರಿಯೆಯನ್ನು ಜುಲೈ 28, 2026ರ ಒಳಗಾಗಿ ಪೂರ್ಣಗೊಳಿಸಲು ಶಿಕ್ಷಣ ಇಲಾಖೆ ಆಖೈರು ಗಡುವು ವಿಧಿಸಿದೆ. ತದನಂತರ ಆಯ್ಕೆಯಾದ ಎಐ ಅತಿಥಿ ಶಿಕ್ಷಕರಿಗೆ ಆಗಸ್ಟ್ ಮೊದಲ ವಾರದಿಂದಲೇ ವಿಶೇಷ ತರಬೇತಿ ಕಾರ್ಯಾಚರಣೆ ಆರಂಭವಾಗಲಿದೆ. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ಗ್ರಾಮೀಣ ಭಾಗದ ಶಾಲಾ ಮಕ್ಕಳಲ್ಲಿ ಹೊಸ ಆಶಾವಾದ ಹಾಗೂ ಭರವಸೆಯನ್ನು ಮೂಡಿಸಿದೆ.











