ಸುದ್ದಿಒನ್, ದಾವಣಗೆರೆ, ನವೆಂಬರ್. 22 : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತದ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಈಗ 94 ವರ್ಷ ವಯಸ್ಸು. ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಮನೂರು ಶುವಶಂಕರಪ್ಪ ಅವರು ಹುಷಾರು ತಪ್ಪಿದ್ದಾರೆ ಎಂದು ತಿಳಿದ ಕೂಡಲೇ, ಅವರು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಅವರನ್ನು ನೋಡಲು ರಾಜಕೀಯ ಗಣ್ಯರು ಕೂಡ ಓಡೋಡಿ ಬಂದಿದ್ದಾರೆ. ಆಸ್ಪತ್ರೆಗೆ ಬಂದು ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಮನೂರು ಶಿವಶಂಕರಪ್ಪರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿದ್ದ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾವನವರ ಆರೋಗ್ಯದ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ. ಇನ್ನು ಈ ವೇಳೆ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಚಿವ ಎಚ್. ಆಂಜನೇಯ ಸಾಥ್ ನೀಡಿದರು.
ಈ ಬಾರಿ ಶಾಮನೂರು ಶಿವಶಂಕರಪ್ಪ ಅವರ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯ್ತು. ಕಳೆದ ಜೂನ್ 16 ಹುಟ್ಟುಹಬ್ಬವನ್ನು ನಗರದಲ್ಲಿ ನಡೆಸಿದ್ದು, ಸಾಮೂಹಿಕ ವಿವಾಹ ಮಹೋತ್ಸವವನ್ನು ಆಚರಣೆ ಮಾಡಲಾಗಿತ್ತು. 1356 ಕೋಟಿ ವೆಚ್ಚದ ಯೋಜನೆಗೂ ಆ ಸಮಯದಲ್ಲಿ ಚಾಲನೆಯನ್ನ ನೀಡಲಾಗಿತ್ತು. ಬೃಹತ್ ಮಟ್ಟದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಹುಟ್ಟುಹಬ್ಬವನ್ನು ಈ ಬಾರಿ ಆಚರಿಸಲಾಗಿದೆ. ಆದರೆ ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಶಾಮನೂರು ಶಿವಶಂಕರಪ್ಪ ಅವರು ಆದಷ್ಟ ಬೇಗ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಲಿದ್ದಾರೆ.
