ಸುದ್ದಿಒನ್, ಚಿತ್ರದುರ್ಗ, ಮೇ. 26 : ಆಧುನಿಕ ತಂತ್ರಜ್ಞಾನದ ಜೀವನಕ್ರಮಕ್ಕೆ ಹೊಂದಿಕೊಂಡ ಮಾನವ ಪ್ರಕೃತಿದತ್ತ ಕೊಡುಗೆಗಳನ್ನು ಮರೆಯುತ್ತಿದ್ದಾನೆ. ಪರಿಸರ, ಆರೋಗ್ಯ, ನೀರು ಮತ್ತು ಭೂಮಿಯ ಸಂರಕ್ಷಣೆ ಬಗ್ಗೆ ಮನುಷ್ಯನಲ್ಲಿ ಆಸಕ್ತಿ ಕುಂಠಿತವಾಗುತ್ತಿದೆ ಎಂದು ಭೂವಿಜ್ಞಾನಿ ಹಾಗೂ ಸಲಹೆಗಾರ ಪ್ರೊ.ಆರ್.ಶಂಕರ್ ಅಭಿಪ್ರಾಯಪಟ್ಟರು.

ನಗರದ ವಿ.ಪಿ ಬಡಾವಣೆಯ ಡಿಎಂಆರ್‍ಜಿ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಭೂವಿಜ್ಞಾನ ಶಿಕ್ಷಣ ಸಂಸ್ಥೆ ಹಾಗೂ ಗ್ರಾಮ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಭೂ ಮತ್ತು ಪರಿಸರ ವಿಜ್ಞಾನದ ಮೂರು ದಿನಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪ್ರಕೃತಿ ವಿಕೋಪಗಳಿಂದ ಆಗುವ ವಿಪತ್ತುಗಳ ಬಗ್ಗೆ ಅರಿವನ್ನು ಮೂಡಿಸಬೇಕು. ನಾಲ್ಕು ಗೋಡೆಗಳಿಂದ ಹೊರಬಂದು ಪ್ರಾಕೃತಿಕವಾಗಿ ಪ್ರಾಯೋಗಿಕ ತರಗತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳುವ ಅವಶ್ಯಕತೆ ಇದೆ. ಅತ್ಯಂತ ಕಡಿಮೆ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಪ್ಪಿಸಬೇಕು. ಶಿಕ್ಷಣದ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಅಂತರ್ಜಲ ಹಾಗೂ ಮಳೆ ನೀರು ಸಂರಕ್ಷಣಾ ತಜ್ಞ ಡಾ.ಎನ್.ಜೆ.ದೇವರಾಜರೆಡ್ಡಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಆಕಾಶದಿಂದ ಸುರಿಯುವ ಮಳೆಯ ನೀರನ್ನು ಕ್ರೂಢೀಕರಿಸದೆ ಕೃತಕವಾಗಿ ಸಂಗ್ರಹಿಸಿದ ನೀರನ್ನು ಮತ್ತು ವಿಷಯುಕ್ತ ಮಣ್ಣಿನಿಂದ ಹರಿದು ಬರುವ ನೀರು ಬಳಕೆ ಮಾಡುತ್ತಿರುವುದು ಆತಂಕಕ್ಕೀಡು ಮಾಡಿದೆ ಎಂದರು.

ಗ್ರಾಮ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಡಿ.ಎಂ.ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮ ಸಂಸ್ಥೆಯು ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಕಾರ್ಯಾಗಾರದಿಂದ ವಿಭಿನ್ನ ಮತ್ತು ಆಧುನಿಕ ಕಲಿಕಾ ವಿಧಾನ, ಭೂ ವ್ಯವಸ್ಥೆಗಳು, ಶಿಲಾಚಕ್ರದ ಅನುಭವದ ಕಲಿಕೆ, ಪರಿಸರ ಬಳಕೆ, ಪ್ರಯೋಗಾಲಯ, ಇಂಟರ್ನೆಟ್, ಗದ್ಯ, ಕವಿತೆ, ಚಿತ್ರಕಲೆ, ಹಾಡು ಮತ್ತು ಕಿರುನಾಟಕಗಳ ಮೂಲಕ ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಉತ್ತೇಜನ ನೀಡಲಾಗುತ್ತದೆ ಎಂದರು.
ಪಿಳ್ಳೆಕರೇನಹಳ್ಳಿಯ ಬಾಪೂಜಿ ಸಮೂಹ ಸಂಸ್ಥೆ ಪಿಯು ವಿದ್ಯಾರ್ಥಿಗಳು, ಮಹೇಶ್ ಪಿಯು ಕಾಲೇಜ್, ಚಿಕ್ಕಗೊಂಡನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ಉಪನ್ಯಾಸಕರು ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು. ಅಂತರರಾಷ್ಟ್ರೀಯ ಭೂವಿಜ್ಞಾನ ಚಳುವಳಿಯ ಯುವ ಸಂಚಾಲಕಿ ಬಿಜುಅಶ್ವತ್ಥಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಗ್ರಾಮ ಸಂಸ್ಥೆಯ ನಿರ್ದೇಶಕ ಎ.ಎಸ್.ಶರಣಪ್ಪ ಅಂಗಡಿ, ಹೆಚ್.ಗೋವಿಂದರಾಜು, ಕೆ.ಜಿ.ಬಸವರಾಜ್ ಹಾಗೂ ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಮತ್ತಿತರ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















