ಕೋವಿಡ್ ಪರೀಕ್ಷೆ ಹೆಚ್ಚಳಕ್ಕೆ ಕ್ರಮವಹಿಸಿ : ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಸೂಚನೆ

2 Min Read

ಚಿತ್ರದುರ್ಗ, (ಜನವರಿ.26) : ಜಿಲ್ಲೆಯಲ್ಲಿ ಕೋವಿಡ್-19 ಪರೀಕ್ಷಾ ಪ್ರಮಾಣ ಹೆಚ್ಚಳಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲೆಯ ಕೋವಿಡ್-19 ಸ್ಥಿತಿಯ ಕುರಿತು ಜಿಲ್ಲೆಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್-19 ಪರೀಕ್ಷೆಯನ್ನು ಪ್ರತಿನಿತ್ಯವೂ ನಿಗಧಿಪಡಿಸಿರುವ ಪ್ರಮಾಣವನ್ನು ಹೆಚ್ಚಳ ಮಾಡಿಕೊಂಡು ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚಿ ತಪಾಸಣೆಗೆ ಒಳಗಪಡಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ಕೋವಿಡ್ ಪರೀಕ್ಷೆಯನ್ನು ನಿತ್ಯವೂ 2000 ಪರೀಕ್ಷೆ ಮಾಡಲಾಗುತ್ತಿತ್ತು. ಇದೀಗ ಪ್ರತಿನಿತ್ಯವೂ 3500ಕ್ಕೂ ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.17.07 ರಷ್ಟಿದೆ ಎಂದು ಮಾಹಿತಿ ನೀಡಿದರು.

ಯಾವುದೇ ಕೋವಿಡ್ ಸೋಂಕಿತರು ವೆಂಟಿಲೇಟರ್‍ನಲ್ಲಿ ಇಲ್ಲ. ಶೇ.94ರಷ್ಟು ಸೋಂಕಿತರು ಮನೆಯಲ್ಲಿ ಐಸೋಲೇಟ್ ಆಗಿದ್ದಾರೆ. ಶೇ.4 ರಿಂದ 5ರಷ್ಟು ಪ್ರಮಾಣದ ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸೋಂಕಿತರಲ್ಲಿ ಗಂಟಲು ನೋವು, ತಲೆನೋವು, ಜ್ವರದ ಲಕ್ಷಣಗಳು ಕಂಡುಬರುತ್ತಿದ್ದು, ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳ ಆಕ್ಸಿಜನ್ ಉತ್ಪಾದನಾ ಘಟಕಗಳ ಮಾಹಿತಿ ಪಡೆದ ಸಚಿವರು, ಜಿಲ್ಲಾಸ್ಪತ್ರೆಯಲ್ಲಿ ತಕ್ಷಣವೇ ಆಕ್ಸಿಜನ್ ಉತ್ಪಾದನಾ ಘಟಕ್ಕೆಕ ಡಿ.ಜೆ ಘಟಕ ಅಳವಡಿಸಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಎಷ್ಟು ಮಕ್ಕಳಿಗೆ ಕೋವಿಡ್ ಸೋಂಕು ತಗಲುವಿದೆ, ಐಸಿಯು ಬೆಡ್ ಹಾಗೂ ವ್ಯಾಕ್ಸಿನೇಷನ್ ಕುರಿತು ಮಾಹಿತಿ ಪಡೆದು, ತಾಲ್ಲೂಕು ಮಟ್ಟದಲ್ಲಿ ಐಸಿಯು ಬೆಡ್‍ಗಳ ಹೆಚ್ಚಳಕ್ಕೆ ಸೂಚಿಸಿದರು. ಕೋವಿಡ್ ಲಸಿಕೆಯ ಮೂರನೇ ಡೋಸ್ ಜಿಲ್ಲೆಯಲ್ಲಿ ಶೇ.60ರಷ್ಟು ಪ್ರಗತಿ ಸಾಧಿಸಿದ್ದು, ಶೇ.100 ರಷ್ಟು ಪ್ರಗತಿ ಸಾಧಿಸುವಂತೆ ತಾಕೀತು ಮಾಡಿದರು.

ಹಿರಿಯೂರು ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ರೈತರೊಂದಿಗೆ ಸರಿಯಾಗಿ ವರ್ತನೆ ಮಾಡುತ್ತಿಲ್ಲ ಎಂಬ ದೂರುಗಳು ಇವೆ. ಈ ಕುರಿತು ತೋಟಗಾರಿಕೆ ಉಪನಿರ್ದೇಶಕರು ಗಮನಹರಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್, ಜಂಟಿ ಕೃಷಿ ನಿರ್ದೇಶಕ ಡಾ.ಪಿ.ರಮೇಶ್‍ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *