Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕನ್ನಡ ರಾಜ್ಯೋತ್ಸವದ ವಿಶೇಷ : ಗ್ರಾಮೀಣ ಪ್ರತಿಭೆಯ ‘ಸಾಹಿತ್ಯ ಸಾಮ್ರಾಟ್’ ಟೀಕಾ ವೆಂಕಟಾಚಲಗುಪ್ತ

---Advertisement---

ವಿಶೇಷ ಲೇಖನ: ಕೆ. ಪಿ. ಎಂ. ಗಣೇಶಯ್ಯ,        ನೀನಾಸಂ-93, ರಂಗ ನಿರ್ದೇಶಕರು, ಚಿತ್ರದುರ್ಗ (ದೂರವಾಣಿ: 9448664878)

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಕನ್ನಡ ನಾಡಿನ ಏಕೀಕರಣ ಹಾಗೂ ಸಾಂಸ್ಕೃತಿಕ ವೈಭವವನ್ನು ಸ್ಮರಿಸುವ ಈ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ತೆರೆಮರೆಯಲ್ಲಿದ್ದುಕೊಂಡೇ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಗ್ರಾಮೀಣ ಸಾಧಕರನ್ನು ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಗರ ಪ್ರದೇಶಗಳ ಸೌಲಭ್ಯಗಳಿಲ್ಲದ ಕಾಲಘಟ್ಟದಲ್ಲಿ, ಗ್ರಾಮೀಣ ಮಣ್ಣಿನಿಂದ ಎದ್ದು ಬಂದು ತಮ್ಮ ಅಪಾರ ಪಾಂಡಿತ್ಯದಿಂದ ನಾಡಿಗೆ ಕೀರ್ತಿ ತಂದ ಮಹನೀಯರಲ್ಲಿ ಚಿತ್ರದುರ್ಗದ ‘ಸಂಸ್ಕೃತ ರತ್ನ’, ‘ಸಾಹಿತ್ಯ ಸಾಮ್ರಾಟ್’ ಟೀಕಾ ವೆಂಕಟಾಚಲಗುಪ್ತರು ಅಗ್ರಗಣ್ಯರು.

ಬಾಲ್ಯ, ಶಿಕ್ಷಣ ಮತ್ತು ವೃತ್ತಿಜೀವನ
ಚಿತ್ರದುರ್ಗ ತಾಲ್ಲೂಕಿನ ಸಜ್ಜನಕೆರೆ ಎಂಬ ಪುಟ್ಟ ಗ್ರಾಮದಲ್ಲಿ 1910ರ ಸೆಪ್ಟೆಂಬರ್ 14ರಂದು ಟೀಕಾ ದೊಡ್ಡರಾಮಪ್ಪ ಮತ್ತು ನರಸಮ್ಮ ದಂಪತಿಗಳ ಸುಪುತ್ರರಾಗಿ ವೆಂಕಟಾಚಲಗುಪ್ತರು ಜನಿಸಿದರು. ಬಾಲ್ಯದಿಂದಲೂ ಅಧ್ಯಯನಶೀಲರಾಗಿದ್ದ ಇವರು ಸಂಸ್ಕೃತ ಸಾಹಿತ್ಯದಲ್ಲಿ ‘ವಿದ್ವಾನ್’ ಪದವಿಯನ್ನು ಪಡೆದು ಪಾಂಡಿತ್ಯವನ್ನು ಸಂಪಾದಿಸಿದರು. ಪ್ರೌಢಶಾಲೆಯಲ್ಲಿ ಸಂಸ್ಕೃತ ಪಂಡಿತರಾಗಿ ವೃತ್ತಿಜೀವನವನ್ನು ಆರಂಭಿಸಿದ ಇವರು, ತಮ್ಮ ಸರಳ ನಡೆ-ನುಡಿ ಹಾಗೂ ಸಜ್ಜನಿಕೆಯಿಂದ ಆದರ್ಶ ಅಧ್ಯಾಪಕರಾಗಿ ಜನಮನ್ನಣೆ ಗಳಿಸಿದರು. ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದ ಇವರು, ಶಿಕ್ಷಣ ಕ್ಷೇತ್ರದ ಜೊತೆಜೊತೆಗೆ ಸಾಹಿತ್ಯ ಕೃಷಿಯಲ್ಲೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.

ಅಪಾರ ಸಾಹಿತ್ಯ ಕೃಷಿ : 

ಇಂದಿನಂತೆ ಆಧುನಿಕ ಮುದ್ರಣ ತಂತ್ರಜ್ಞಾನ ಮತ್ತು ಸಂವಹನ ಸೌಲಭ್ಯಗಳಿಲ್ಲದ ಆ ಕಾಲದಲ್ಲಿಯೂ ಟೀಕಾ ವೆಂಕಟಾಚಲಗುಪ್ತರು ರಚಿಸಿದ ಸಾಹಿತ್ಯ ರಾಶಿ ಬೆರಗುಗೊಳಿಸುವಂತಿದೆ. ಸಂಸ್ಕೃತದ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ಜನಸಾಮಾನ್ಯರಿಗೆ ಜ್ಞಾನದ ಬೆಳಕನ್ನು ನೀಡಿದರು. ‘ಶಿವತತ್ವ ರತ್ನಾಕರ’ ಗ್ರಂಥದ ಅನುವಾದ ಹಾಗೂ ‘ವಾಸವಿ ಸುಪ್ರಭಾತ’ದ ಕನ್ನಡ ಭಾವಾರ್ಥ ಇವರ ಭಾಷಾ ಪ್ರೌಢಿಮೆಗೆ ಹಿಡಿದ ಕೈಗನ್ನಡಿಯಾಗಿದೆ. ಇದಲ್ಲದೆ ವೈಶ್ಯ ಕುಲದೇವತೆ, ನಿತ್ಯ ಕರ್ಮಾನುಷ್ಠಾನ ವಿಧಾನ, ತುಳಸಿ ಮಹಿಮೆ, ಸನ್ಮಾರ್ಗ ದರ್ಶನ, ವೈದಿಕ ಕರ್ಮಗಳು, ವರದಕ್ಷಿಣೆ, ಶೃಂಗೇರಿ ಜಗದ್ಗುರುಗಳು ಮತ್ತು ವೈಶ್ಯರು, ಕುಲದೀಪಿಕೆ, ಗೋತ್ರ ಪ್ರವರ ದರ್ಪಣ ಹಾಗೂ ಚಿತ್ರದುರ್ಗದ ಬರಹಗಾರರು ಮುಂತಾದ ಹಲವಾರು ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ವಿದ್ವತ್ಪೂರ್ಣ ಲೇಖನಗಳು ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರ ಮೆಚ್ಚುಗೆಗೆ ಪಾತ್ರವಾಗಿದ್ದವು. ಕೇವಲ ಬರವಣಿಗೆಗೆ ಸೀಮಿತವಾಗದೆ ನಾಡಿನಾದ್ಯಂತ ಧಾರ್ಮಿಕ ವಿಚಾರಗೋಷ್ಠಿಗಳನ್ನು ಸಂಘಟಿಸಿದ್ದ ಇವರು, ಚಿತ್ರದುರ್ಗ ಜಿಲ್ಲಾ ಬರಹಗಾರರ ಸಂಘದ ಕೋಶಾಧ್ಯಕ್ಷರಾಗಿ ಹಾಗೂ ಎಸ್.ಕೆ.ಪಿ ಸೊಸೈಟಿಯ ಅಧ್ಯಕ್ಷರಾಗಿ ಸಮಾಜಮುಖಿ ಸೇವೆ ಸಲ್ಲಿಸಿದ್ದಾರೆ.

ಸಾಧನೆಗೆ ಸಂದ ಗೌರವ ಮತ್ತು ಪ್ರಶಸ್ತಿಗಳು : 

ಟೀಕಾ ವೆಂಕಟಾಚಲಗುಪ್ತರ ನಿಸ್ವಾರ್ಥ ಸಾಹಿತ್ಯ ಸೇವೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ನಾಡಿನ ಅನೇಕ ಮಠಮಾನ್ಯಗಳು, ಸಂಘ-ಸಂಸ್ಥೆಗಳು ಹಾಗೂ ಸರ್ಕಾರ ಗೌರವಿಸಿವೆ. 1964ರಲ್ಲಿ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠವು ‘ಸಾಹಿತ್ಯಭೂಷಣ’ ಪ್ರಶಸ್ತಿ ನೀಡಿ ಸತ್ಕರಿಸಿದರೆ, 1966ರಲ್ಲಿ ಅಜ್ಜಂಪುರದ ಆರ್ಯವೈಶ್ಯ ಯುವಜನ ಸಂಘವು ‘ವಿದ್ಯಾಭೂಷಣ’ ಬಿರುದು ನೀಡಿ ಗೌರವಿಸಿತು. ಮುಂದೆ 1972ರಲ್ಲಿ ದಾವಣಗೆರೆಯ ಆರ್ಯವೈಶ್ಯ ಯುವಜನ ಸಂಘವು ‘ಸಾಹಿತ್ಯ ಸಾಮ್ರಾಟ್’ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತು. ಇವರ ಶೈಕ್ಷಣಿಕ ಮತ್ತು ಸಾಹಿತ್ಯಿಕ ಸೇವೆಯನ್ನು ಮೆಚ್ಚಿ 1980ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಪ್ರತಿಷ್ಠಿತ ‘ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಿತು. ಬಸವಾಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳು ‘ಸಂಸ್ಕೃತರತ್ನ’ ಬಿರುದು ನೀಡಿ ಆಶೀರ್ವದಿಸಿದರೆ, 1995ರಲ್ಲಿ ಅಖಿಲ ಭಾರತ ವಾಸವಿ ದೇವಾಲಯಗಳ ಒಕ್ಕೂಟವು ‘ವಾಸವಿ ಸಾಹಿತ್ಯ ಶಿರೋಮಣಿ’ ಪ್ರಶಸ್ತಿಯನ್ನು ನೀಡಿ ಗೌರವ ಸಲ್ಲಿಸಿತು.

1999ರ ಜುಲೈ 7ರಂದು ಇಹಲೋಕ ತ್ಯಜಿಸಿದ ವಿದ್ಯಾಭೂಷಣ ಶ್ರೀ ಟೀಕಾ ವೆಂಕಟಾಚಲಗುಪ್ತರು ಇಂದಿಗೂ ತಮ್ಮ ಕೃತಿಗಳ ಮೂಲಕ ಅಮರರಾಗಿದ್ದಾರೆ. ಯಾವುದೇ ಆಧುನಿಕ ಸವಲತ್ತುಗಳಿಲ್ಲದ ಕಾಲದಲ್ಲಿ ಕೇವಲ ತಮ್ಮ ಛಲ, ಶ್ರಮ ಮತ್ತು ಭಾಷಾಭಿಮಾನದಿಂದ ಮುಂದಿನ ಪೀಳಿಗೆಗೆ ಅಮೂಲ್ಯವಾದ ಸಾಹಿತ್ಯ ಸಂಪತ್ತನ್ನು ಬಿಟ್ಟುಹೋಗಿರುವ ಇವರ ಬದುಕು ನಿಜಕ್ಕೂ ರೋಮಾಂಚನಕಾರಿ. ಇಂತಹ ಮಹಾನ್ ಸಾಧಕರಿಗೆ ಜನ್ಮ ನೀಡಿದ ಕನ್ನಡ ನಾಡಿನಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಸೌಭಾಗ್ಯ. ಈ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹ ಧೀಮಂತ ಸಾಧಕರಿಗೆ ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತಾ, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕಲ್ಪ ಮಾಡೋಣ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now