ಬೆಳಗಾವಿ: ಕಬ್ಬು ಬೆಳೆಗೆ 3500 ರೂಪಾಯಿ ನೀಡಬೇಕೆಂದು ಒತ್ತಾಯಿಸಿ ರೈತರು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಇಂದು ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬೆಳಗಾವಿಯಲ್ಲಿ ರೈತರು ಅಂತರಾಷ್ಟ್ರೀಯ ಹೆದ್ದಾರಿ 215 ಅನ್ನು ತಡೆದು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಇನ್ನು ರೈತರ ಪ್ರತಿಭಟನೆಗೆ ಗುಳೇದ ಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ ಕೂಡ ಭಾಗಿಯಾಗಿದ್ದು, ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
ಬೆಳಗಾವಿಯ ಗದ್ದನಕೇರಿ ಕ್ರಾಸ್ ಬಳಿ ರಸ್ತೆ ಬಂದ್ ಮಾಡಿರುವ ಪ್ರಯುಕ್ತ ಓಡಾಡುವವರಿಗೆ ತೊಂದರೆಯಾಗುತ್ತಿದೆ. ಹೆದ್ದಾರಿ ಬಂದ್ ಆಗಿರುವ ಹಿನ್ನಲೆ ಪರಿಸ್ಥಿತಿಯನ್ನು ನಿಯಂತ್ರಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಇದೇ ವೇಳೆ ಹಸಿರು ಶಾಲನ್ನು ಗಾಳಿಯಲ್ಲಿ ತಿರುಗಿಸಿ, ರಾಜ್ಯ ಮತ್ತು ಕೇಂದ್ರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರಸ್ತೆ ತಡೆದು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಇನ್ನು ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ರೈತರ ಸಮಸ್ಯೆ ಬಗೆಹರಿಸುವ ಎಲ್ಲಾ ಅಧಿಕಾರವನ್ನು ಸಿಎಂ ಸಿದ್ದರಾಮಯ್ಯ ಅವರಿಗೇನೆ ನೀಡಲಾಗಿದೆ. ಇಂದು ಸಿದ್ದರಾಮಯ್ಯ ಅವರು ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಮೊದಲು ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಸಭೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ, ಬಳಿಕ ರೈತರ ಜೊತೆಗೆ ಸಭೆ ನಡೆಸಲಿದ್ದಾರೆ. ರೈತರಿಗೆ ನೀಡುವ ಭರವಸೆ, ಆಶ್ವಾಸನೆ ಮೇಲೆ ಪ್ರತಿಭಟನೆ ಏನಾಗಬಹುದು ಅಂತ ಗೊತ್ತಾಗುತ್ತೆ. ಒಂದು ವೇಳೆ ರೈತರು ಕೇಳುತ್ತಿರುವ 3500 ರೂಪಾಯಿ ನೀಡಿದೆ ಹೋದಲ್ಲಿ ಪ್ರತಿಭಟನೆ ಇನ್ನು ಉಗ್ರ ರೂಪ ಪಡೆಯಬಹುದೇನೋ..?




