ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 22 : ನಿರಾಶ್ರಿತರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಕಳೆದ ಹಲವಾರು ವರ್ಷಗಳಿಂದ ಸಮಿತಿಯಿಂದ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ ಎಂದು ಯೋಗ ವೇದಾಂತ ಸೇವಾ ಸಮಿತಿಯ ಉಪಾಧ್ಯಕ್ಷ ಕೆ.ಎಂ.ವೀರೇಶ್ ಹೇಳಿದರು.
ಗೋನೂರಿನ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಬುಧವಾರ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮ
ಉದ್ಘಾಟಿಸಿ ಅವರು ಮಾತನಾಡಿದರು.
ನೀವೆಲ್ಲರೂ ವಿಶೇಷ ಪರಿಸರ ಒಳ್ಳೆಯ ವಾತಾವರಣದಲ್ಲಿರುವ ನಿಮಗೆ ಈ ದೀಪಾವಳಿ ದುಃಖ, ಆತಂಕ, ನೋವು ನಿವಾರಣೆ ಮಾಡುವ ಹಬ್ಬವಾಗಲಿ ಎಲ್ಲರೂ ಸೇರಿದರೆ ಹಬ್ಬ ಎಂದು ತಿಳಿಸಿದರು. ನೀವುಗಳು ಕುಟುಂಬದಿಂದ ದೂರವಿದ್ದರೂ ನೆಮ್ಮದಿಯಿಂದ ಇದ್ದೀರಿ. ಏಕೆಂದರೆ ಚಿತ್ರದುರ್ಗದಂತಹ ಹಿಂದುಳಿದ ಪ್ರದೇಶದಲ್ಲಿ ಸುಸರ್ಜಿತವಾದ ನಿರಾಶ್ರಿತ ಕೇಂದ್ರವು ನಿಮಗೆ ಆಶ್ರಯ ಕೊಟ್ಟು ರಾಜ್ಯ ಮತ್ತು ಜಿಲ್ಲೆಯಲ್ಲಿ ಗಮನ ಸೆಳೆದಿದೆ ಎಂದರು.
ಸಮಿತಿ ಕಾರ್ಯದರ್ಶಿ ಎಸ್.ಜಿ. ಸುರೇಶ್ ಬಾಬು ಮಾತನಾಡಿ ದೀಪಾವಳಿ ಹಬ್ಬವನ್ನು ನಮ್ಮ ಮನೆಯಲ್ಲಿ ಆಚರಿಸುವುದಕ್ಕಿಂತ ಹೆಚ್ಚಿನ ಸಂತೋಷ ನಿರಾಶ್ರಿತರ ಕೇಂದ್ರದಲ್ಲಿ ಆಚರಣೆ ಮಾಡುವುದರಿಂದ ದೊರೆಯುತ್ತಿದೆ. ಸಮಿತಿಯಿಂದ ಬಾಲ ಸಂಸ್ಕಾರ, ವ್ಯಸನ ಮುಕ್ತ ಅಭಿಯಾನ, ಮಾತಾ ಪಿತೃ ಪೂಜ್ಯ ದಿನಾಚರಣೆ, ಯೌವನ ಸುರಕ್ಷಾ, ಸಂಸ್ಕಾರ ಕೊಡುವ ಕಾರ್ಯಕ್ರಮಗಳು, ಯೋಗ ಶಿಬಿರಗಳು ಸೇರಿ ನಾನಾ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಸಮಿತಿ ಖಜಾಂಚಿ ಸಿ.ವಿ. ವೆಂಕಟ ರಾಮರಾವ್ ಮಾತನಾಡಿ ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕು ಬೇರೆಯವರ ದುಃಖ ಆನಂದದಲ್ಲಿ ಭಾಗಿಯಾಗಬೇಕು ಇದರಿಂದ ನಿಜವಾದ ತೃಪ್ತಿ ಸಿಗುತ್ತದೆ. ಮನೆ ಸಮಾಜದಿಂದ ದೂರವಿರುವ ವ್ಯಕ್ತಿಗಳನ್ನು ಆತ್ಮೀಯತೆಯಿಂದ ಮಾತನಾಡಿದಾಗ ಮಾನಸಿಕ ಖಿನ್ನತೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಮತ್ತು ಹೊರ ರಾಜ್ಯದ ನಿರಾಶ್ರಿತರು ಇಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅವರೆಲ್ಲರೂ ನಾವು ಅನಾಥರೆಂಬ ಭಾವನೆ ಮೂಡದ ರೀತಿ ಕೇಂದ್ರದ ಸಿಬ್ಬಂದಿ ಮಾನವೀಯ ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಅದರ ಭಾಗವಾಗಿ ಯೋಗ ವೇದಾಂತ ಸೇವಾ ಸಮಿತಿಯಿಂದ ದೀಪಾವಳಿ ಹಬ್ಬವನ್ನು ನಿರಾಶ್ರಿತರೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸುವ ಬೆಳಕಿನ ಹಬ್ಬ ಈ ದೀಪಾವಳಿ. ನಿರಾಶ್ರಿತರಿಗೆ ಸಿಹಿ ಮತ್ತು ಹಣ್ಣು ವಿತರಿಸಿ ಶುಭಾಶಯ ಹೇಳಿದರು. ನಿರಾಶ್ರಿತ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ದೀಪ ಬೆಳಗಿಸಿ ಹಬ್ಬ ಆಚರಿಸಿ ಸಂಭ್ರಮಿಸಿದರು.
ರೆಡ್ ಕ್ರಾಸ್ ನ ಕಾರ್ಯದರ್ಶಿ ಮಜಹರುಲ್ಲಾ, ನಿರಾಶ್ರಿತ ಪರಿಹಾರ ಕೇಂದ್ರದ ಆಪ್ತ ಸಮಾಲೋಚಕ ಮಹಾದೇವಯ್ಯ, ಅಧೀಕ್ಷಕರಾದ ವಿಜಯಕುಮಾರ್, ಬಾಪೂಜಿ ಬಿಎಡ್ ಕಾಲೇಜ್ ಪ್ರಿನ್ಸಿಪಲ್ ಜಯಲಕ್ಷ್ಮಿ, ಇತರರು ಉಪಸ್ಥಿತರಿದ್ದರು.


