ಚಿತ್ರದುರ್ಗ ದಾವಣಗೆರೆ ಹಾಲು ಒಕ್ಕೂಟ ಸ್ಥಾಪನೆಗೆ ಕ್ರಮ : ಬಿ. ಸಿ. ಸಂಜೀವ ಮೂರ್ತಿ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 19 : ಶಿವಮೊಗ್ಗ ಹಾಲು ಒಕ್ಕೂಟವು ರೈತರ ಪರವಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವುದರಿಂದ ಚಿತ್ರದುರ್ಗ ಜಿಲ್ಲೆಯ ಹೈನುಗಾರಿಕೆಯ ರೈತರು ಉತ್ತಮ ಲಾಭಾಂಶ ಪಡೆಯುವುದಲ್ಲದೆ ಒಕ್ಕೂಟವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 7ಕೋಟಿ 39 ಲಕ್ಷ ಲಾಭಾಂಶವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಒಕ್ಕೂಟದ ನಿರ್ದೇಶಕ ಬಿ ಸಿ ಸಂಜೀವ ಮೂರ್ತಿ ತಿಳಿಸಿದರು.

ನಗರದ ಶಿವಮೊಗ್ಗ ಹಾಲು ಒಕ್ಕೂಟದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಂದಿನಿ ಉತ್ಪನ್ನಗಳು ರಾಜ್ಯ ಅಂತರಾಜ್ಯ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ತನ್ನ ಉತ್ತಮ ಉತ್ಪನ್ನಗಳ ಮೂಲಕ ಹೆಗ್ಗಳಿಕೆ ಗಳಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 380 ಹಾಲು ಒಕ್ಕೂಟದ ಸಂಘಗಳಿದ್ದು 2.40 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಶಿವಮೊಗ್ಗ ಹಾಲು ಒಕ್ಕೂಟವು 8.50 ಲಕ್ಷ ಲೀಟರ್ ಹಾಲು ಕೊಳ್ಳುತ್ತಿದ್ದು ದಿನನಿತ್ಯ ನಾಲ್ಕು ಲಕ್ಷ ಲೀಟರ್ ವ್ಯಾಪಾರ ಮಾಡಿ ಉಳಿದ ಹಾಲಿನಲ್ಲಿ ಹಾಲಿನ ಪುಡಿ ಬೆಣ್ಣೆ ಸೇರಿದಂತೆ ಇತರೆ ಉತ್ಪನ್ನಗಳನ್ನು ಮಾಡಿ ಟೆಂಡರ್ ಮೂಲಕ ಮಾರಾಟ ಮಾಡುತ್ತಿದ್ದೇವೆ ಎಂದರು.

ಚಿತ್ರದುರ್ಗ ದಾವಣಗೆರೆ ಪ್ರತ್ಯೇಕ ಹಾಲು ಒಕ್ಕೂಟ: ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ 800 ಹಾಲು ಉತ್ಪಾದಕ ಸಂಘಗಳಿದ್ದು ಚಿತ್ರದುರ್ಗ ದಾವಣಗೆರೆ ಜಿಲ್ಲೆ ಸೇರಿ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಿಸಲು ಈಗಾಗಲೇ ಪ್ರಯತ್ನಗಳು ನಡೆದಿದ್ದು ದಾವಣಗೆರೆ ಜಿಲ್ಲೆಯಲ್ಲಿ 15 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಬೃಹತ್ ಡೈರಿ ಸ್ಥಾಪನೆಯಾಗಲಿದ್ದು ದಿನ ನಿತ್ಯ ಐದು ಲಕ್ಷ ಲೀಟರ್ ಹಾಲು ಶೇಖರಣೆ ಮಾಡಲು ನಿರ್ಧರಿಸಲಾಗಿದೆ ಈ ಒಕ್ಕೂಟದ ಸ್ಥಾಪನೆಯಿಂದ ನಂದಿನಿ ಉತ್ಪನ್ನಗಳ ಸುಮಾರು 17 ಪ್ರಾಡೆಕ್ಟ್ ಗಳನ್ನು ತಯಾರಿಸಲು ಅನುಕೂಲವಾಗುತ್ತದೆ ಮುಂದಿನ ಎರಡು ವರ್ಷಗಳಲ್ಲಿ ಇದರ ಕಾರ್ಯಾಚರಣೆ ಆರಂಭವಾಗಲಿದ್ದು ಚಿತ್ರದುರ್ಗ ದಾವಣಗೆರೆ ಜಿಲ್ಲೆಯ ರೈತರಿಗೆ ಇದರಿಂದ ಬಹು ಉಪಯೋಗ ಆಗಲಿದೆ ಈಗಾಗಲೇ ಜಿಲ್ಲೆಯ ರೈತರಿಗೆ ಹಸು ಕೊಳ್ಳಲು ಸಹಾಯಧನ ಹಾಲು ಕರೆಯುವ ಯಂತ್ರ ಖರೀದಿಸಲು ಸಬ್ಸಿಡಿ ವಿಮೆ ಸೌಲಭ್ಯ 10 ದಿನಗಳಿಗೊಮ್ಮೆ ಹಾಲಿನ ಮಾರಾಟದ ಮೊತ್ತವನ್ನು ನೇರವಾಗಿ ಜಮೆ ಹಾಗೂ ಒಕ್ಕೂಟದ ಸದಸ್ಯರು ಮರಣ ಹೊಂದಿದ್ದಲ್ಲಿ ಇದುವರೆಗೂ 56 ಲಕ್ಷ ಪರಿಹಾರವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಮುಲ್ ಮಾರ್ಕೆಟಿಂಗ್ ವಿಭಾಗದ ಇರ್ಫಾನ್ ಹಾಗೂ ಕಚೇರಿ ಸಿಬ್ಬಂದಿ ಅಭಿಷೇಕ, ಸುರೇಶ್ ಬಾಬು, ಅಭಿ, ಭೂಕಾಂಬುದಿ ಜಗದೀಶ್ ಹಾಜರಿದ್ದರು.

Share This Article