ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಸಣ್ಣ ವಯಸ್ಸಿನ ಮಗುವು ಸದಾಕಾಲ ಬೆರಳು ಚೀಪುವುದು ಒಂದು ಸಮಸ್ಯೆಯಲ್ಲ. ಆದರೆ ದೊಡ್ಡದಾದ ಮೇಲೂ ಮಗು ಸದಾ ಕಾಲ ಬಾಯಲ್ಲಿ ಬೆರಳನ್ನು ಇಟ್ಟುಕೊಂಡರೆ ಅದು ಖಂಡಿತವಾಗಿ ಒಂದು ಅನಾರೋಗ್ಯಕರ ಲಕ್ಷಣವಾಗಿದ್ದು, ವಿವಿಧ ರೀತಿಯ ದೈಹಿಕ ಸಮಸ್ಯೆಗಳನ್ನು ತಂದೊಡಬಹುದು. ನೋಡಲು ಒಂದು ಸಣ್ಣ ಸಮಸ್ಯೆಯಂತೆ ಕಂಡುಬಂದರೂ ಬೆರಳು ಚೀಪುವುದು ಖಂಡಿತವಾಗಿ ಒಂದು ಅನಾರೋಗ್ಯಕರ ಸಮಸ್ಯೆಯಾಗಿದೆ.
ಅದರಲ್ಲೂ ಮಗು ಎಚ್ಚರವಿರಲಿ ಮಲಗಿರಲಿ ಸದಾ ಕಾಲ ಬಾಯೊಳಗೆ ಬೆರಳನ್ನು ಇಟ್ಟುಕೊಂಡಿದ್ದರೆ ಅದನ್ನು ನಾವು ಒಂದು ಬಿಡಿಸಲಾರದ ಚಟ ಇಂದು ನಿರ್ಧರಿಸಬೇಕಾಗುತ್ತದೆ, ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ಬೇಕಾಗುತ್ತದೆ. ಐದಾರು ವರ್ಷ ವಯಸ್ಸಿಗೆ ಬಂದ ಮೇಲೂ ಮಕ್ಕಳು ಬೆರಳು ಚೀಪುವುದು ಪೋಷಕರಿಗೆ ಒಂದು ರೀತಿಯ ಮುಜುಗರ,ಅವಮಾನ ತರುತ್ತದೆ. ಇಂತಹ ಮಕ್ಕಳು ತಾಯಂದಿರಿಗೆ ಸಮಸ್ಯೆ ಆಗುವ ಮುನ್ನವೇ ಮಗುವಿನ ಪೋಷಕರು ಜಾಗ್ರತೆ ವಹಿಸಬೇಕಾಗುತ್ತದೆ. ಬೆರಳು ಚೀಪುವುದು ಖಂಡಿತವಾಗಿ ಒಂದು ರೋಗವಲ್ಲ, ಬದಲಾಗಿ ಅದೊಂದು ಚಟ.ರೋಗದ ಲಕ್ಷಣವೂ ಅಲ್ಲ. ಸಾಮಾನ್ಯವಾಗಿ ಶೇಕಡಾ 60 ರಿಂದ 70ರಷ್ಟು ಮಕ್ಕಳು ಬೆರಳು ಚೀಪುತ್ತಲೇ ದೊಡ್ಡವರಾಗಿರುತ್ತಾರೆ. ವಯಸ್ಸು -ಬೆಳವಣಿಗೆ ಆದಂತೆ ಈ ಚಟವೂ ಹಂತ ಹಂತವಾಗಿ ಹೋಗುತ್ತದೆ.ಆದರೆ ಕೆಲವು ಮಕ್ಕಳಲ್ಲಿ ಇದು ಉಳಿದುಬಿಡುತ್ತದೆ. ನಿರ್ದಿಷ್ಟ ಸಮಯದ ನಂತರ ಇದನ್ನು ಮುಂದುವರೆಸುವ ಮಕ್ಕಳಿಗೆ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಕನಿಷ್ಠ ಎರಡೂವರೆ ವರ್ಷದ ತನಕ ಮಗುವು ಬೆರಳು ಚೀಪುವುದು ಒಂದು ಸಾಮಾನ್ಯ ಸ್ಥಿತಿ ಆಗಿರುತ್ತದೆ. ನಂತರ ಪ್ರೌಢ ಹಲ್ಲುಗಳ ಬೆಳವಣಿಗೆ ಶುರುವಾಗಿರುವ ಕಾರಣಕ್ಕೆ ಬೆರಳು ಚೀಪುವುದರಿಂದ ಅವುಗಳ ಬೆಳವಣಿಗೆಯಲ್ಲಿ ವ್ಯತ್ಯಾಸ ಬರುತ್ತದೆ. ಹಲ್ಲುಗಳ ಸ್ಥಾನಗಳಲ್ಲಿ ಬದಲಾವಣೆ ಉಂಟಾಗಿ ವಕ್ರದಂತ, ಉಬ್ಬುಹಲ್ಲು ಸಮಸ್ಯೆ ಬರುತ್ತದೆ.
ಇದನ್ನು ಪೋಷಕರು ಎಂದಿಗೂ ನಿರ್ಲಕ್ಷಿಸಬಾರದು.
ಮಕ್ಕಳು ಹುಟ್ಟಿದಾಗಿನಿಂದ ಕೈ ಕಾಲುಗಳನ್ನು ಆಡಿಸುತ್ತಲೇ ಇರುತ್ತವೆ. ಎದ್ದು ತೆವಳಿ ಮುಂದೆ ಹೋಗುವ ಮುನ್ನ ಕಾಲಿನ ಬೆರಳನ್ನೇ ಕೆಲವೊಮ್ಮೆ ಬಾಯಲ್ಲಿ ಇಟ್ಟುಕೊಳ್ಳುತ್ತವೆ. ತೆವಳುವ ಹಂತದ ಬೆಳವಣಿಗೆ ಹಂತದಲ್ಲಿ ಕಾಲುಗಳನ್ನು ಬಿಟ್ಟು ಕೈ ಬೆರಳಿನತ್ತ ತಮ್ಮ ಗಮನ ಕೇಂದ್ರೀಕರಿಸುತ್ತವೆ.
ಕಾರಣಗಳೇನು :
* ಮಗುವಿನ ಕಡೆಗೆ ಪೋಷಕರ ಗಮನದ ಕೊರತೆ.
* ತಾತ್ಕಾಲಿಕವಾಗಿ ಶುರುವಾದ ಕ್ರಿಯೆಯು ಚಟವಾಗಿ ಪರಿವರ್ತನೆ ಆದಾಗ ಅದು ನಿತ್ಯ ನಿರಂತರವಾಗಿ ನಡೆಯುತ್ತದೆ.
* ಇಷ್ಟಪಟ್ಟ ಆಹಾರ ಬೇಕಾದಾಗ ಸಿಗದಿದ್ದಾಗ ಸತತ ಲಾಲಾರಸ ತಡೆಯಲು ಮಗು ಬೆರಳನ್ನೇ ಬಾಯಲ್ಲಿ ಇಟ್ಟುಕೊಳ್ಳಲು ಪ್ರಾರಂಭಿಸುತ್ತದೆ.
* ಬಾಯಲ್ಲಿ ಬೆರಳು ಇಟ್ಟುಕೊಂಡರೆ ಮಾತ್ರ ತನಗೆ ನಿದ್ದೆ ಬರುತ್ತದೆ ಎಂಬ ಭಾವನೆಯಲ್ಲಿ ಅದನ್ನೇ ಪುನರಾವರ್ತನೆ ಮಾಡುವುದು.
* ಏಕಾಂಗಿತನವು ಸತತವಾಗಿ ಮಗುವನ್ನು ಕಾಡಿದಾಗ.
* ಅನಾಥ ಭಾವ,ಅನಾಥ ಪ್ರಜ್ಞೆ ಮಗುವನ್ನು ಕಾಡಿದಾಗ.
ಆಗುವ ಪರಿಣಾಮಗಳು:21/2( ಎರಡೂವರೆ ವರ್ಷ ನಂತರದಲ್ಲಿ )
* ಮುಂದವಡೆಯ ಮೇಲ್ಭಾಗದ ಬಾಚಿ ಹಲ್ಲುಗಳು ಹೆಬ್ಬೆರಳಿನ ಒತ್ತಡಕ್ಕೆ ದಿನೇ ದಿನೇ ಮುಂದಕ್ಕೆ ಬಂದು ಬಾಯಿಂದ ಹೊರ ಚಾಚುತ್ತವೆ. ಉಬ್ಬು ಹಲ್ಲುಗಳಾಗಿ ಮಾರ್ಪಡುತ್ತದೆ.
* ಸದಾಕಾಲ ತೆರೆದಿರುವ ಬಾಯಿ. ಇದು ಸೋಂಕು ಬಾಯೊಳಗೆ ಸುಲಭವಾಗಿ ಹರಡಲು ಕಾರಣವಾಗುತ್ತದೆ.
* ಬಾಯಿಂದ ಬರುವ ದುರ್ವಾಸನೆ ವಸಡಿನೂತ, ವಸಡಿನಲ್ಲಿ ರಕ್ತಸ್ರಾವ.
* ಹಲ್ಲುಗಳ ಜೋಡಣೆಯಲ್ಲಿ ವ್ಯತ್ಯಾಸ,ವಕ್ರದಂತ ಸಮಸ್ಯೆ.
* ಊಟ ಮಾಡಲು ಆಗದಿರುವುದು.
* ಸತತ ಜೊಲ್ಲಿನ ತೇವಾಂಶದಿಂದ ನೆನೆದ ಬೆರಳು ದುರ್ವಾಸನೆಯಿಂದ ಕೂಡಿರುತ್ತದೆ.
* ಮಾತಿನಲ್ಲಿ ಸ್ವರದಲ್ಲಿ, ಉಚ್ಚಾರಣೆಯಲ್ಲಿ ಸ್ಪಷ್ಟತೆ ಇರುವುದಿಲ್ಲ.
* ಬೆರಳಿನ ಬೆಳವಣಿಗೆಯಲ್ಲಿ ಸಮಸ್ಯೆ ತೋರಿ ಬರುವುದು.
ಏನು ಮಾಡಬಹುದು :
* ಮುಖ್ಯವಾಗಿ ಮಗುವಿಗೆ ಸಮಯಕ್ಕೆ ಸರಿಯಾಗಿ ಆಹಾರವನ್ನು ನೀಡುತ್ತಿರಬೇಕು ಇದು ಪೋಷಕರ ಹಾಗೂ ಮಗುವನ್ನು ನೋಡಿಕೊಳ್ಳುತ್ತಿರುವವರ ಕರ್ತವ್ಯ ಹಾಗೂ ಜವಾಬ್ದಾರಿ.
* ವೈದ್ಯರಿಂದ ಇದರ ಕಾರಣಗಳನ್ನು ತಿಳಿದುಕೊಂಡು ಅದನ್ನು ಸರಿಪಡಿಸುವ ಕಡೆಗೆ ಗಮನ ಹರಿಸಬೇಕು.
* ಬೆಳೆಯುವ ಮಕ್ಕಳಿಗೆ ಪೋಷಕರ ಪ್ರೀತಿ, ವಾತ್ಸಲ್ಯ, ಆರೈಕೆ ಸಿಗುತ್ತಿರಬೇಕು.
* ಬೆಳವಣಿಗೆ ಆದಂತೆ, ವಯಸ್ಸು ಆದಂತೆ ಇದರ ಸಮಸ್ಯೆ ತೀವ್ರವಾಗುತ್ತದೆ. ಆ ಕಾರಣಕ್ಕೆ ಪ್ರಾಥಮಿಕ ಹಂತದಲ್ಲಿಯೇ ಇದನ್ನು ಗುರುತಿಸಿ ಸರಿಪಡಿಸಬೇಕು.
* ಮಗು ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳುವಂತಿದ್ದರೆ ಅದಕ್ಕೆ ಬೆರಳು ಚೀಪೋದರಿಂದ ಆಗಬಹುದಾದ ತೊಂದರೆಗಳನ್ನು ದೃಶ್ಯಾವಳಿಗಳು ಫೋಟೋಗಳನ್ನು ತೋರಿಸಿ, ಸಮಸ್ಯೆ ವಿವರಿಸಿ ಅರ್ಥ ಮಾಡಿಸಿ.
* ಆಗಾಗ ಬೆರಳು ಚೀಪದಂತೆ ಹೇಳುತ್ತಿರಬೇಕು ಅರಿವು ಮೂಡಿಸಬೇಕು ಹೊರತು ಶಿಕ್ಷೆ ಕೊಡಬಾರದು.
* ಅರ್ಥಮಾಡಿಕೊಳ್ಳದೆ ಇರುವ ತುಂಬಾ ಸಣ್ಣ ವಯಸ್ಸಿನ ಮಕ್ಕಳಿದ್ದಲ್ಲಿ ಅದರ ಬೆರಳಿಗೆ ದುರ್ವಾಸನೆಯುಕ್ತ ಲೇಪನ ರಾತ್ರಿಯ ಸಮಯದಲ್ಲಿ ಹಚ್ಚಬೇಕು.
* ಮಗುವಿಗೆ ಆಗಾಗ ನೆನಪಾಗುವಂತೆ ಅದರ ಬೆರಳಿಗೆ ಉಗುರು ಬಣ್ಣ ಹಚ್ಚಬೇಕು.
* ಸಮಸ್ಯೆ ಹೆಚ್ಚಾಗಿದ್ದಾಗ ಒಂದೇ ದಿನಕ್ಕೆ ಆಗಲಿ, ಒಂದೇ ಸಲಕ್ಕೆ ಅದು ಬಿಡಲು ಅಸಾಧ್ಯ. ಆ ಕಾರಣಕ್ಕೆ ಹಂತ ಹಂತವಾಗಿ ಕಡಿಮೆ ಮಾಡ ಬೇಕಾಗಿರುವುದರಿಂದ ತಾಳ್ಮೆ, ಸಹನೆ ಅತ್ಯಗತ್ಯವಾಗಿರುತ್ತದೆ.
* ಚಟ ಬಿಡಿಸುವುದಕ್ಕೆ ಮಗುವನ್ನು ಹೊಡೆಯುವುದಾಗಲಿ, ಅವಮಾನ ಮಾಡುವುದಾಗಲಿ,ಇತರರ ಮುಂದೆ ನೋವಾಗುವಂತೆ ಮಾತನಾಡುವುದಾಗಲಿ.. ಮಾಡಕೂಡದು.
* ದಂತ ವೈದ್ಯರಲ್ಲಿ ಇದಕ್ಕಾಗಿ ಬಾಯೊಳಗೆ ಹಾಕಿಕೊಳ್ಳುವ ಪ್ಲೇಟ್ ಮಾಡಿಸಿಕೊಳ್ಳಬಹುದು.(Habit breaking appliance. )
* ಮಗುವಿಗೆ ಏಕಾಂಗಿ ಭಾವ ಕಾಡದಂತೆ ಜಾಗ್ರತೆ ವಹಿಸಬೇಕು.
* ಚಟವನ್ನು ಬಿಡುವಂತೆ ಪ್ರೇರೇಪಿಸಿ.
* ಬೆರಳು ಚೀಪುವುದು ತುಂಬಾ ದಿನ ಇರದಂತೆ ನೋಡಿಕೊಳ್ಳಿರಿ.
*



