ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 18 : ಕತ್ತಲು..ಕತ್ತಲು..ಕತ್ತಲು… ಇದು ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಹಳೇ ರಾಷ್ಟ್ರೀಯ ಹೆದ್ದಾರಿಯ NH – 4 (ಸರ್ವಿಸ್ ರಸ್ತೆಯ) ದುಸ್ಥಿತಿ.
ಸಂಜೆಯಾದರೆ ಸಾಕು ಆವರಿಸುವ ಕತ್ತಲ ಸಾಮ್ರಾಜ್ಯದಲ್ಲಿ ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಎಂಬ ಆತಂಕ ನಗರದ ನಿವಾಸಿಗಳಿಗೆ ಇನ್ನಿಲ್ಲದಂತೆ ಆವರಿಸುತ್ತಿದೆ. ಚಳ್ಳಕೆರೆ ಗೇಟ್, ತುರುವನೂರು ಗೇಟ್, ಹೊಸಪೇಟೆ ರಸ್ತೆ, ಮೆದೇಹಳ್ಳಿ ಸಮೀಪದ ಸರ್ವಿಸ್ ರಸ್ತೆಯಲ್ಲಿ ಬೀದಿ ದೀಪಗಳು ಕಾರ್ಯ ಮರೆತು ವರ್ಷಗಳೇ ಕಳೆದಿವೆ. ಈ ರಸ್ತೆ ನಗರಕ್ಕೆ ಹೊಂದಿಕೊಂಡಿರುವ ಕಾರಣ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಅಕ್ಕಪಕ್ಕದಲ್ಲಿ ಬಡಾವಣೆಗಳು ಇರುವುದರಿಂದ ಸಾರ್ವಜನಿಕರೂ ಹೆಚ್ಚಾಗಿ ಓಡಾಡುತ್ತಾರೆ. ಸಂಜೆಯ ಬಳಿಕ ಕತ್ತಲು ಆವರಿಸುವುದರಿಂದ ಇನ್ನಿಲ್ಲದಂತೆ ಸಮಸ್ಯೆ ಅನುಭವಿಸುತ್ತಿದ್ದಾರೆ.
ಬ್ಯಾಂಕ್ ಕಾಲೊನಿಯಿಂದ ಆರ್ಟಿಒ ರಸ್ತೆ ಮೂಲಕ ನಗರ ಪ್ರವೇಶಿಸಿದರೆ ನಿಮ್ಮನ್ನು ಕತ್ತಲು ಸ್ವಾಗತಿಸುತ್ತಿದೆ.
ಐಯುಡಿಪಿ ಬಡಾವಣೆಯಿಂದ ಮುರುಘಾ ಮಠದವರೆಗೂ ಹೆದ್ದಾರಿಯ ಎರಡು ಬದಿಯಲ್ಲಿ ಸರ್ವಿಸ್ ರಸ್ತೆ ಇದೆ. ಈ ಎರಡು ಭಾಗದಲ್ಲೂ ಹಲವಾರು ಬಡಾವಣೆಗಳಿವೆ. ಕೆಳಗೋಟೆ, ಕೆ.ಹೆಚ್.ಬಿ. ಕಾಲೋನಿ, ಬ್ಯಾಂಕ್ ಕಾಲೋನಿ, ಬಿ.ಎಲ್. ಗೌಡ ಲೇಔಟ್, ಜೆಸಿಆರ್ ಬಡಾವಣೆ, ವಿದ್ಯಾನಗರ, ವಿಜಯನಗರ, ತರಳಬಾಳು ನಗರ, ಮಠದ ಕುರುಬರಹಟ್ಟಿ ಹೀಗೆ ಹೆದ್ದಾರಿ ಸರ್ವೀಸ್ ರಸ್ತೆಗೆ ಸಾಕಷ್ಟು ಬಡಾವಣೆಗಳು ಹೊಂದಿಕೊಂಡಿದ್ದು, ಈ ಭಾಗದಲ್ಲಿ ಸಂಚರಿಸುವ ಪಾದಚಾರಿಗಳು ಸೇರಿದಂತೆ ವಾಹನ ಸವಾರರು ನಿತ್ಯವೂ ಕತ್ತಲಲ್ಲಿಯೆ ಸಂಚರಿಸುವಂತಾಗಿದೆ.
ಹೆದ್ದಾರಿ ಬದಿಯಲ್ಲಿ ಬೀದಿ ದೀಪಗಳು ಇಲ್ಲದಿರುವುದು
ಬೈಕ್, ಕಾರು ಚಾಲಕರು ಹೈರಾಣಾಗಿದ್ದಾರೆ. ಕತ್ತಲಿನ ಕಾರಣಕ್ಕೆ ಸರ್ವಿಸ್ ರಸ್ತೆಗಳು ಕುಡುಕರ ಅಡ್ಡೆಗಳಾಗಿ ಬದಲಾಗಿವೆ. ಇದರಿಂದ ಸಾರ್ವಜನಿಕರು ಓಡಾಡುವುದು ಕಷ್ಟವಾಗಿದೆ. ಆದರೆ ಬೀದಿ ದೀಪದ ನಿರ್ವಹಣೆ ಕೊರತೆಯಿಂದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಸರ್ವಿಸ್ ರಸ್ತೆಯ ಜತೆಗೆ ಬೀದಿ ದೀಪಗಳೇ ಇಲ್ಲದ ರಸ್ತೆಗಳೂ ಸಾಕಷ್ಟಿವೆ. ನಾಮ್ಕಲ್ ಗ್ಯಾರೇಜ್ನಿಂದ ಭೋವಿ ಗುರುಪೀಠದವರೆಗಿನ ಸರ್ವೀಸ್ ರಸ್ತೆ ಬೀದಿ ದೀಪದಿಂದ ಮುಕ್ತವಾಗಿದೆ. ಕತ್ತಲು ಕವಿಯುತ್ತಿದ್ದಂತೆ ಬೆಳಕು ಚೆಲ್ಲಬೇಕಿದ್ದ ಬೀದಿದೀಪಗಳು ಹಾಳಾಗಿದ್ದು, ಅವು ಇದ್ದೂ ಇಲ್ಲದಂತಾಗಿವೆ. ಸಂಪೂರ್ಣ ಕತ್ತಲು ಆವರಿಸಿರುವ ನಗರದ ತುರುವನೂರು ರಸ್ತೆ, ಬಸವೇಶ್ವರ ಆಸ್ಪತ್ರೆ ರಸ್ತೆಯಲ್ಲಿ ಸಂಜೆಯಾದರೆ ಸಾಕು ಅಪಘಾತಗಳು ಸಾಮಾನ್ಯವಾಗಿವೆ.
ಬೆಳಕಿಲ್ಲದ ಕಾರಣ ಸರ್ವೀಸ್ ರಸ್ತೆಯಲ್ಲಿ ಅಪಘಾತಗಳು, ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ನಗರದಲ್ಲಿ ಒಂದು ಕಡೆ ಉಜ್ವಲ ಬೆಳಕಿದ್ದರೆ ಮತ್ತೊಂದು ಕಡೆ ಕತ್ತಲು ಎಂಬ ಸ್ಥಿತಿ ನಿರ್ಮಾಣವಾಗಿದೆ. ಬೀದಿ ದೀಪಗಳ ಅಸಮರ್ಪಕ ನಿರ್ವಹಣೆಯಿಂದಾಗಿ ನಿತ್ಯ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಬೀದಿ ದೀಪ ನಿರ್ವಹಣೆ ಜವಾಬ್ದಾರಿ ಹೊತ್ತ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಿಕ್ಕಾಟದಲ್ಲಿ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಒಬ್ಬರ ಮೇಲೊಬ್ಬರು ಜವಾಬ್ದಾರಿ ಹಸ್ತಾಂತರ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂಬುದು ನಾಗರಿಕರ ಆರೋಪ. ಸಂಜೆಯ ಬಳಿಕ ಸರ್ವಿಸ್ ರಸ್ತೆಯ ಸಂಚಾರಕ್ಕೆ ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ.
ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ಈ ಊರಿನಲ್ಲಿ ನಗರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಬೀದಿ ದೀಪಗಳ ನಿರ್ವಹಣೆ ಇಲ್ಲದಿರುವುದು ನಿಜವಾಗಿಯೂ ಬೇಸರವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಕುಗ್ರಾಮಗಳಂತಹ ಊರುಗಳಲ್ಲಿ ಕೂಡಾ ರಸ್ತೆ, ಬೀದಿ ದೀಪದಂತಹ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುತ್ತಿರುವ ಸರ್ಕಾರಗಳು ಹಳ್ಳಿಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವಾಗ ಜಿಲ್ಲಾ ಕೇಂದ್ರದಲ್ಲಿ ಅದರಲ್ಲೂ ಹೆದ್ದಾರಿಯಲ್ಲಿ ಇಂತಹ ಪರಿಸ್ಥಿತಿ ಇರುವುದು ನಿಜಕ್ಕೂ ಸೋಜಿಗವೆನಿಸುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ, ಇಷ್ಟೆಲ್ಲಾ ಮುಂದುವರೆದಿದ್ದರೂ ನಾವು ಯಾವ ಕಾಲದಲ್ಲಿದ್ದೇವೆ ಎಂದು ಅನುಮಾನ ಮೂಡುತ್ತಿದೆ ಎನ್ನುತ್ತಾರೆ ಬ್ಯಾಂಕ್ ಕಾಲೋನಿ ನಿವಾಸಿ ಪ್ರವೀಣ್.











