ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 12 : ಚಿತ್ರದುರ್ಗ ತಾಲ್ಲೂಕಿನ ಚಂದ್ರವಳ್ಳಿ ಕೆರೆ, ಮಲ್ಲಾಪುರ ಕೆರೆ, ಚಳ್ಳಕೆರೆ ತಾಲ್ಲೂಕಿನ ಕೆರೆಕಲ್ ಕೆರೆ, ಮೊಳಕಾಲ್ಮೂರು ತಾಲ್ಲೂಕು ರಂಗಯ್ಯನದುರ್ಗ ದಲ್ಲಿ ಸಾಹಸ ಪ್ರವಾಸೋದ್ಯಮ ಹಾಗೂ ಜಲಕ್ರೀಡೆಗಳನ್ನು ಕೈಗೊಳ್ಳಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಬಿವೃದ್ಧಿ ಪ್ರಾಧಿಕಾರವು ಕಳೆದ ವರ್ಷವೇ ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಂದ್ರವಳ್ಳಿ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳಾದ ಕಯಾಕಿಂಗ್, ಕನೋಯಿಂಗ್, ವಿಂಡ್ ಸರ್ಫಿಂಗ್, ಜಿಟ್ ಸ್ಕೀಯಿಂಗ್ ವಾಟರ್ ಜಾರ್ಬಿಂಗ್ ಹಾಗೂ ಬೋಟಿಂಗ್ ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆ ಹಾಗೂ ನಗರಸಭೆಯು ನಿರಾಪೇಕ್ಷಣ ಪತ್ರ ನೀಡಿದೆ ಎಂದು ಪ್ರವಾಸೋದ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಶೀಘ್ರ ಇದನ್ನು ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಭದ್ರಾ ಮೆಲ್ದಂಡೆ ಯೋಜನೆ ಕಾರ್ಯಪಾಲಕ ಅಭಿಯಂತರ ಚಂದ್ರಪ್ಪ ಬಾರಿಕರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್, ಪ್ರವಾಸೋದ್ಯಮ, ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ, ರಾಜ್ಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



